ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇಂದು ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಇಂದಿನವರೆಗೆ ಪತ್ತೆಯಾಗಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 15,712. ಇದರಲ್ಲಿ ಕಳೆದ 24 ಗಂಟೆಗಳಲ್ಲಿ 1,334 ಕೇಸ್ ಗಳು ದಾಖಲಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಹೊಸದಾಗಿ ಪತ್ತೆಯಾಗಿರುವ 186 ಪ್ರಕರಣಗಳಲ್ಲಿ ಯಾವ ಪ್ರಕರಣವೂ ತಬ್ಲೀಗಿ ಸಮಾವೇಶದ ನಂಟು ಹೊಂದಿಲ್ಲ. ಮಹಾರಾಷ್ಟ್ರದಲ್ಲಿ ಒಂದೇ ದಿನ 328 ಪ್ರಕರಣಗಳು ಬೆಳಕಿಗೆ ಬಂದಿದ್ದು, ಗುಜರಾತ್ನಲ್ಲೂ ದಾಖಲೆಯ 280 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ. ಅಹ್ಮದಾಬಾದ್ನಗರದಲ್ಲೇ 239 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1376 ಆಗಿದೆ. 12 ಮಂದಿ ಒಂದೇ ದಿನ ಸೋಂಕಿನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 53ಕ್ಕೇರಿದೆ. ಮಹಾರಾಷ್ಟ್ರದಲ್ಲಿ 11 ಸಾವಿನೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3648ಕ್ಕೇರಿದೆ.
ಎರಡು ದಿನಗಳ ಹಿಂದೆ 361 ಪ್ರಕರಣಗಳು ಪತ್ತೆಯಾಗಿದ್ದ ಮಧ್ಯಪ್ರದೇಶದಲ್ಲಿ ಶನಿವಾರ 44 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಆಂಧ್ರದಲ್ಲಿ ಹೊಸದಾಗಿ 31 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 600ರ ಗಡಿದಾಟಿದೆ. ಕೇರಳದಲ್ಲಿ ಕೇವಲ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ








