ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಇದೀಗ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿದಾಟಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಅವಧಿಯಲ್ಲಿ ರಾಜ್ಯದ 45 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.
ದುಬೈಯಿಂದ ಮೇ 12ರಂದು ಆಗಮಿಸಿದವರ ಪೈಕಿ ದ.ಕ. ಜಿಲ್ಲೆಯಲ್ಲಿ 15 ಮತ್ತು ಉಡುಪಿ ಜಿಲ್ಲೆಯ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಯೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.
ಬೆಂಗಳೂರು ನಗರದಲ್ಲಿ 13 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದರೆ, ಬೀದರ್ ಮತ್ತು ಹಾಸನದಲ್ಲಿ ತಲಾ 3, ಚಿತ್ರದುರ್ಗದಲ್ಲಿ 2 ಮತ್ತು ಶಿವಮೊಗ್ಗದಲ್ಲಿ ಓರ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಪೈಕಿ 476 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 35 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.








