ಲಕ್ನೋ: 59 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ (Uttar Pradesh) ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚಿಂತಾಮಣಿ ಶರ್ಮಾ ಎಂಬ ವ್ಯಕ್ತಿ 39 ವರ್ಷದ ನರ್ಸ್ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಆರೋಪಿ ವಿರುದ್ಧ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಸಬಿಹಾ ಖಾತೂನ್ ನ್ಯಾಯಾಲಯದಲ್ಲಿ ಸಂತ್ರಸ್ತೆ ನರ್ಸ್ ಪ್ರಕರಣ ವಿಚಾರಣೆಗೊಳಪಟ್ಟಿತು. ಅರ್ಜಿ ಆಲಿಸಿದ ಸಿಜೆಎಂ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದರು. ಸಂತ್ರಸ್ತೆ 15 ವರ್ಷ ವಯಸ್ಸಿನವಳಿದ್ದಾಗ ಅವಳನ್ನು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಶರ್ಮಾ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯ ಅಧ್ಯಯನಕ್ಕೆ ಸಹಾಯ ಮಾಡುವುದಾಗಿ ಅವರ ಕುಟುಂಬಕ್ಕೆ ಹತ್ತಿರವಾಗಿದ್ದ ಎಂದು ನರ್ಸ್ ಆರೋಪಿಸಿದ್ದಾರೆ.
ನಂತರ ಹೆದರಿಸಿ ಅತ್ಯಾಚಾರ ನಡೆಸಿದ್ದಾನೆ. ಮದುವೆಯಾಗುವುದಾಗಿ ಭರವಸೆ ನೀಡುವ ಮೂಲಕ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ್ದಾನೆ. ಆನಂತರ ರಹಸ್ಯವಾಗಿ ಬೇರೊಬ್ಬಳೊಂದಿಗೆ ಮದುವೆಯಾಗಿದ್ದ. ನಂತರವೂ ವಂಚಿಸುತ್ತಲೇ ಇದ್ದ ಎಂದು ನರ್ಸ್ ಆರೋಪಿಸಿದ್ದಾರೆ ಎನ್ನಲಾಗಿದೆ.








