ಬೆಂಗಳೂರು: ಹೊಸಕೋಟೆ ಹುಲಿ ಎಂಟಿಬಿ ನಾಗರಾಜ್ ಅವರನ್ನೇ ಮಣಿಸಿ ಗೆಲುವಿನ ನಗೆ ಬೀರಿದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅಕ್ಟೋಬರ್ 25ರಂದು ಕಾಂಗ್ರೆಸ್ ಪಕ್ಷ ಸೇರುವುದು ಪಕ್ಕಾ ಆಗಿದೆ.
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಚಿನ್ಹೆ ಹಸ್ತದ ಜತೆ ಶರತ್ ಬಚ್ಚೇಗೌಡ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಬಿಜೆಪಿ ನೀಡಿದ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನದ ಆಫರ್ ತಿರಸ್ಕರಿಸಿ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬೇಕೇ ಬೇಕು ಎಂದು ಶರತ್ ಬಚ್ಚೇಗೌಡ ಹಠ ಹಿಡಿದಿದ್ದರು. ಕೊನೆಗೂ ಬಿಜೆಪಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದ್ದರಿಂದ ಪಕ್ಷೇತರರಾಗಿ ಕಣಕ್ಕೆ ನಿಂತು ಭಾರಿ ಬಹುಮತ ಪಡೆದು ಗೆದ್ದಿದ್ದರು.
ಆದರೆ, ಪಕ್ಷೇತರ ಶಾಸಕರಾಗಿ ಉಳಿಯುವುದಕ್ಕಿಂತ ರಾಷ್ಟ್ರೀಯ ಪಕ್ಷದಲ್ಲಿ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.
ಎಂಟಿಬಿ ನಾಗರಾಜ್ ಎಂಎಲ್‍ಸಿ ಆಗಿ ಆಯ್ಕೆಯಾಗಿರುವುದರಿಂದ ಮುಂದಿನ ಚುನಾವಣೆವರೆಗೆ ಶರತ್ ಬಚ್ಚೇಗೌಡ ಅವರಿಗೆ ಪ್ರಬಲ ಪ್ರತಿಸ್ಪರ್ಧಿಗಳು ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಹೆಚ್ಚಿನ ಮತದಾರರನ್ನು ಆಕರ್ಷಣೆ ಮಾಡಬಹುದು ಎಂಬ ಲೆಕ್ಕಾಚಾರ ಶರತ್ ಬಚ್ಚೇಗೌಡ ಅವರಿಗೆ ಇದ್ದರೂ ಇರಬಹುದು. ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಗಲು ಸಜ್ಜಾಗಿದ್ದಾರೆ.
ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಸೇರುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಶರತ್ ಕಾಂಗ್ರೆಸ್ ಸೇರುವುದು ವಿಳಂಬವಾಗಿದೆ.
ತಾವು ಗೆದ್ದ ಹೊಸಕೋಟೆಯಲ್ಲೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿ ಎದುರಾಳಿ ಎಂಟಿಬಿ ನಾಗರಾಜ್ ಅವರಿಗೆ ಸೆಡ್ಡು ಹೊಡೆಯಲು ಶರತ್ ಬಚ್ಚೇಗೌಡ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.