ಪತ್ರಕರ್ತರನ್ನೂ ಕೋವಿಡ್ ವಾರಿಯರ್ಸ್ ಎಂದು ಘೋಷಣೆ ಮಾಡಿದ ಒಡಿಶಾ ಸರ್ಕಾರ
ಒಡಿಶಾ : ದೇಶ ಹಾಗೂ ರಾಜ್ಯದಲ್ಲಿ ಕೊರೊನಾ 2 ನೇ ಅಲೆಯ ಭೀಕರತೆಯಲ್ಲಿ ಜನ ತತ್ತರಿಸಿಹೋಗಿದ್ದಾರೆ. ಮತ್ತೊಂದೆಡೆ ಜನರ ಸೇವೆಗಾಗಿ ಕೊರೊನಾ ವಾರಿಯರ್ಸ್ ಪ್ರಾಣದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಮಾಧ್ಯಮದವರು ಸಹ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸೂಕ್ತ ಮಾಹಿತಿಗಳನ್ನ ನೀಡುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಾಧ್ಯಮದವರಿಗೆ ಒಡಿಶಾ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದ ಕಾರ್ಯನಿರತ ಪತ್ರಕರ್ತರನ್ನು ಮುಂಚೂಣಿ ಕೋವಿಡ್ ಸೇನಾನಿಗಳೆಂದು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಅನುಮೋದಿಸಿರುವ ನವೀನ್ ಪಟ್ನಾಯಕ್, ಕಾರ್ಯನಿರತ ಪತ್ರಕರ್ತರು ಅಪಾರ ಸುದ್ದಿಗಳನ್ನು ನೀಡುವ ಮೂಲಕ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಈ ಮೂಲಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಕೋವಿಡ್ ವಿರುದ್ಧದ ಸರ್ಕಾರದ ಹೋರಾಟಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರ ಈ ನಿರ್ಧಾರದಿಂದ ಗೋಪಬಂಧು ಸಾಂಬದಿಕ ಸ್ವಾಸ್ಥ್ಯ ಭೀಮಾ ಯೋಜನೆ ವ್ಯಾಪ್ತಿಗೆ ಬರುವ 6,944 ಕಾರ್ಯನಿರತ ಪತ್ರಕರ್ತರಿಗೆ ಪ್ರಯೋಜ ನವಾಗಲಿದ್ದು, ತಲಾ 2 ಲಕ್ಷ ರೂ.ಗಳ ಆರೋಗ್ಯ ವಿಮೆ ಸಿಗಲಿದೆ.