ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದಲ್ಲಿ ಶಾಸಕರ ಪುತ್ರನ ವಾಹನವನ್ನು ಚುನಾವಣಾಧಿಕಾರಿಗಳು ಪರಿಶೀಲನೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದಲ್ಲಿ ಚುನಾವಣಾ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿ ಶಾಸಕರ ಪುತ್ರನ ಕಾರನ್ನು ಚೆಕ್ ಮಾಡದೆ ಕಳುಹಿಸಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಗವಾಡ ತಹಸೀಲ್ದಾರ್ ಸ್ಥಳಕ್ಕೆ ತೆರಳಿದ್ದರು. ಪರಿಶೀಲನೆ ನಡೆಸದ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಪುತ್ರ ಶ್ರೀನಿವಾಸ ಪಾಟೀಲ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಚೆಕ್ ಮಾಡದೆ ಬಿಟ್ಟಿದ್ದಾರೆ. ಮುಂದೆ ಇದೇ ರೀತಿ ವರ್ತನೆ ಕಂಡು ಬಂದರೆ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.








