ಕೊರೋನಾ ವೈರಸ್ ಸೋಂಕಿಗೆ ಇಟಲಿ ತತ್ತರಿಸಿ ಹೋಗಿದೆ. ಅಪಾರ ಪ್ರಮಾಣದ ಸಾವು ನೋವುಗಳಿಂದ ಇಟಲಿಯಲ್ಲಿ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಇಟಲಿಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೇರಳ ಮೂಲದ ನರ್ಸ್ ಒಬ್ಬರು ಅಲ್ಲಿನ ಆಸ್ಪತ್ರೆಯ ಭಯಾನಕ ಪರಿಸ್ಥಿತಿಯ ಚಿತ್ರಣವನ್ನು ವಾಟ್ಸ್ ಆಫ್ ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕೇಳುತ್ತಿದ್ದರೆ, ಹೃದಯ ನೋವಿನಿಂದ ಚಡಪಡಿಸುತ್ತದೆ. ಅಂತಹ ಪರಿಸ್ಥಿತಿ ತಮ್ಮ ದೇಶಕ್ಕೆ ಬರದೇ ಇರಲಪ್ಪ ದೇವರೇ ಎಂದು ಮನಸ್ಸು ದೀನವಾಗಿ ಬೇಡಿಕೊಳ್ಳುತ್ತದೆ.
ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಬಹಳಷ್ಟು ಇರುವುದರಿಂದ, ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲು ಜಾಗದ ಕೊರತೆ ಉಂಟಾಗಿದೆ. ಎಲ್ಲಾ ಆಸ್ಪತ್ರೆಗಳ ಐಸಿಯುಗಳು ಭರ್ತಿಯಾಗಿದೆ. ಅಲ್ಲಿನ ವಾರ್ಡ್ಗಳನ್ನು, ರೋಗಿಗಳ ವೈಟಿಂಗ್ ಹಾಲ್, ಆಪರೇಷನ್ ಥಿಯೇಟರ್, ರೆಸ್ಟ್ ರೂಮ್ ಗಳನ್ನು ಐಸಿಯು ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ದೊರೆತರೆ ಮಾತ್ರ ಅವರು ಜೀವಿಸುವ ಸಾಧ್ಯತೆ, ಆದರೆ ಸೋಂಕು ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದರಿಂದ ಸ್ಥಳಾವಕಾಶದ ಕೊರತೆಯಿಂದ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಖಾಲಿ ಜಾಗಗಳನ್ನು ಐಸಿಯುಗಳನ್ನಾಗಿ ಮಾಡಿದ್ದರೂ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳು ಇಲ್ಲದೇ ಸಮಸ್ಯೆಯಾಗುತ್ತಿದೆ.
ಕೊರೋನಾ ವೈರಸ್ ಸೋಕಿಂತ ರೋಗಿಗಳು ಜೀವನ್ಮರಣದ ಸ್ಥಿತಿಯಲ್ಲಿ ಆಸ್ಪತ್ರೆಯ ಮೆಟ್ಟಿಲು, ವಾಹನ ಪಾರ್ಕಿಂಗ್ ಸ್ಥಳ, ಹೀಗೆ ಎಲ್ಲೆಡೆಯೂ ನರಳಾಡುತ್ತಿದ್ದಾರೆ. ಇಟಲಿ ಆರೋಗ್ಯ ಇಲಾಖೆ ಅಲ್ಲಿನ ಆಸ್ಪತ್ರೆಗಳಿಗೆ 80 ವರ್ಷ ಕೆಳಗಿನವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಉಪಚರಿಸಿ ಎಂಬ ಸೂಚನೆ ನೀಡಿದೆ.
ವೆಂಟಿಲೇಟರ್ ತೆಗೆದರೆ ಸಾಯುತ್ತಾರೆ ಎಂಬ ಅರಿವಿದ್ದರೂ ಬದುಕುವ ಸಾಧ್ಯತೆ ಕಡಿಮೆ ಇರುವ ಒಬ್ಬನಿಂದ ತೆಗೆದು ಮತ್ತೊಂದು ಬದುಕಬಲ್ಲ ರೋಗಿಗೆ ಅಳವಡಿಸಿಬೇಕಾದ ಸಂಕಷ್ಟ ಸ್ಥಿತಿಯನ್ನು ಅಲ್ಲಿನ ನರ್ಸ್ ಗಳು ಎದುರಿಸುತ್ತಿದ್ದಾರೆ. ವೆಂಟಿಲೇಟರ್ ತೆಗೆಯುವಾಗ ಆ ಸೋಂಕಿತ, ಸಾವಿನ ಭಯದಲ್ಲಿ ನೋಡುವ ನೋಟ ಯಾರಿಗೂ ಬೇಡ ಎಂದು ಕೇರಳ ಮೂಲದ ನರ್ಸ್ ಇಟಲಿಯಲ್ಲಿನ ನರಕಯಾತನೆಯನ್ನು ಹಂಚಿಕೊಂಡಿದ್ದಾರೆ.
ಅಂತಹ ಕಠೋರ ಪರಿಸ್ಥಿತಿ ನಮ್ಮ ದೇಶದಲ್ಲಿ ಬರದೇ ಇರಲಿ, ಅಲ್ಲಿನ ಜನರಂತೆ ನಾವು ಕೊರೊನಾ ವೈರಸ್ ಸೋಂಕನ್ನು ಅಸಡ್ಡೆ ಮಾಡದೆ, ಕೊರೊನಾ ಅಪಾಯವನ್ನು ಗಂಭೀರವಾಗಿ ಪರಿಗಣಿಸೋಣ. ಮನೆಯಲ್ಲೇ ಇದ್ದು, ಕೊರೊನಾ ವಿರುದ್ಧ ಮಹಾಯುದ್ಧ ಸಾರೋಣ. ಸರಕಾರದ ಆದೇಶ ಪಾಲಿಸಿ ಜವಾಬ್ದಾರಿಯುತ ಪ್ರಜೆಗಳೆಂದು ವಿಶ್ವಕ್ಕೆ ತೋರಿಸೋಣ.








