ಚಿಕ್ಕೋಡಿ: ಗುರುವಾರವಷ್ಟೇ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀ ಮನವಿ ಮಾಡಿದ್ದರು. ಆದರೆ, ಇದರ ಬೆನ್ನಲ್ಲಿಯೇ ಈಗ ಲಿಂಗಾಯತ ಸ್ವಾಮೀಜಿ ಕೂಡ ಸಿಎಂ ಸ್ಥಾನಕ್ಕೆ ಮನವಿ ಮಾಡಿದ್ದಾರೆ.
ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ವ್ಯಕ್ತವಾಗಿದೆ. ಸಿಎಂ ಸ್ಥಾನವನ್ನು ಬದಲಾವಣೆ ಮಾಡುವುದೇ ಆದರೆ, ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನ ಹೆಚ್ಚುವರಿ ಮಾಡಿದರೆ ಲಿಂಗಾಯತರಿಗೆ ಸ್ಥಾನ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಎಂಬಿ ಪಾಟೀಲ್, ಈಶ್ವರ ಖಂಡ್ರೆ, ಎಸ್ಎಸ್ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪರಂತಹ ನಾಯಕರಿಗೆ ಅವಕಾಶ ನೀಡಬೇಕು. ಶಿ, ಉಜ್ಜಯಿನಿ ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆಯಾಗಿದೆ ಎಂದು ಹೇಳಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲೇ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ, ಸಿದ್ದರಾಮಯ್ಯ ಅವರಿಗೆ ಉದ್ದೇಶಿಸಿ, ನಿಮಗೆ ಅನುಭವ ಇದೆ, ಈಗ ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡಿ ಎಂದು ಹೇಳಿ, ಮುಜುಗರ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ, ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದರು. ಈಗ ಮತ್ತೆ ಸ್ವಾಮೀಜಿಗಳು ಜಾತಿಯ ಮುಂದಿಟ್ಟುಕೊಂಡು ಬೇಡಿಕೆ ಇಡಲು ಆರಂಭಿಸಿದ್ದಾರೆ.