ಬೆಂಗಳೂರು, ಮೇ 21 : ಕೊರೋನಾ ಸೋಂಕು ತಡೆಗಟ್ಟಲು ಘೋಷಣೆಯಾದ ಲಾಕ್ ಡೌನ್ ಎಲ್ಲಾ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಜಾಗತಿಕ ಅರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದೀಗ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಕೊಡುತ್ತಿರುವ ಓಲಾ ಲಾಕ್ ಡೌನ್ ನ ಪರಿಣಾಮ ಅರ್ಥಿಕ ನಷ್ಟ ಅನುಭವಿಸುತ್ತಿದ್ದು, ಅದರಿಂದ ಪಾರಾಗಲು ಉದ್ಯೋಗ ಕಡಿತ ಮಾಡಲಾಗುವುದು ಎಂದು ತಿಳಿಸಿದೆ.
ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್ವಾಲ್ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಜಾರಿಯಾಗಿದ್ದ ಲಾಕ್ ಡೌನ್ ನಿಂದ ಅರ್ಥಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ 1,400 ಮಂದಿ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದೇವೆ. ಕಳೆದ ಎರಡು ತಿಂಗಳಲ್ಲಿ ನಮ್ಮ ಆದಾಯ ಶೇ 95ರಷ್ಟು ಕುಸಿದಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಸೋಂಕಿನಿಂದಾಗಿ ಇನ್ನೂ ಕೂಡ ನಮ್ಮ ಉದ್ಯಮದ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ಕೊರೋನಾ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟು ನಮ್ಮನ್ನು ಬಹಳ ಕಾಲದವರೆಗೆ ಕಾಡುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಜಗತ್ತಿನಾದ್ಯಂತ ನಮ್ಮ ಚಾಲಕರು ಮತ್ತು ಅವರ ಕುಟುಂಬದವರು ಬಹಳ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ ಎರಡು ತಿಂಗಳಿನಿಂದ ನಮ್ಮ ಆದಾಯ ಶೇ 95ರಷ್ಟು ಇಳಿಕೆಯಾಗಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ವಹಿವಾಟು ನೆಲಕಚ್ಚಿದ್ದು, ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ 1,400 ಉದ್ಯೋಗ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಭವಿಷ್ ಅಗರ್ವಾಲ್ ಸಿಬ್ಬಂದಿಗಳಿಗೆ ಕಳುಹಿಸಿರುವ ಇಮೇಲ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ವಾರದಲ್ಲೇ ಉದ್ಯೋಗ ಕಡಿತಕ್ಕೆ ಸಂಬಂಧಿಸಿದ ಕಾರ್ಯ ನಡೆಯಲಿದ್ದು, ಮುಂದಿನ ವಾರದಲ್ಲಿ ಓಲಾ ಫೂಡ್ಸ್ ಹಾಗೂ ಓಲಾ ಹಣಕಾಸು ಸೇವೆಗಳ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ. ಇದರ ನಂತರ ಕೊರೊನಾ ಬಿಕ್ಕಟ್ಟಿಗೆ ಸಂಬಂಧಿಸಿ ಯಾವುದೇ ಉದ್ಯೋಗ ತೆರವು ಕಾರ್ಯ ಚರಣೆ ಇರುವುದಿಲ್ಲ ಎಂದು ಓಲಾ ಹೇಳಿದೆ. ಕೆಲಸದಿಂದ ತೆರವುಗೊಳಿಸುವ ಸಿಬ್ಬಂದಿಗಳಿಗೆ ಮೂರು ತಿಂಗಳ ಕಾಲ ನಿಗದಿತ ವೇತನ ನೀಡುವುದಾಗಿ ಹೇಳಿರುವ ಓಲಾ ಅವರಿಗೆ ಮತ್ತೊಂದು ಉದ್ಯೋಗ ದೊರಕುವವರೆಗೆ ಅಥವಾ ಡಿಸೆಂಬರ್ 31 2020ರ ವರೆಗೆ ಎಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ, ಜೀವ ವಿಮೆ ಮತ್ತು ಅಪಘಾತ ವಿಮೆ ಸೌಲಭ್ಯ ಮುಂದುವರಿಸಲಿದೆ ಎಂದು ಹೇಳಿದೆ. ಅಲ್ಲದೇ ಓಲಾ ಸಿಬ್ಬಂದಿಗಳು ಬೇರೆಡೆ ಉದ್ಯೋಗ ಪಡೆಯಲು ಸಹಾಯ ಮಾಡಲಿದೆ ಎಂದು ತಿಳಿಸಿದೆ. ಪ್ರಮುಖ ಹುದ್ದೆಯಲ್ಲಿ ಇರುವವರ ವೇತನ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ದೇಶಾದ್ಯಂತ ಸುಮಾರು 2.5 ಲಕ್ಷಕ್ಕೂ ಹೆಚ್ಚಿನ ಚಾಲಕ ಪಾಲುದಾರರನ್ನು ಓಲಾ ಹೊಂದಿದ್ದು, ದೇಶದ 200 ಹೆಚ್ಚಿನ ನಗರಗಳಲ್ಲಿ ಸೇವೆ ನೀಡುತ್ತಿದೆ. ಕೊರೋನಾದಿಂದ ಉಂಟಾಗಿರುವ ಬಿಕ್ಕಟ್ಟನ್ನು ಅಲ್ಪಾವಧಿ ಎಂದು ಭಾವಿಸಿದ್ದೆವು ಆದರೆ ಇದರ ಪರಿಣಾಮ ದೀರ್ಘಾವಧಿಯದು ಎಂದು ಹೇಳಿದ್ದಾರೆ.ಮಾರ್ಚ್ 25 ರಂದು ದೇಶದಲ್ಲಿ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಕಂಪನಿಗಳಿಗೆ ಹೊಡೆತ ಬಿದ್ದಿತ್ತು. ಇದೀಗ ದೇಶಾದ್ಯಂತ ನಾಲ್ಕನೇ ಹಂತದ ಕೊರೊನಾ ಲಾಕ್ ಡೌನ್ ನ ಮಾರ್ಗಸೂಚಿಗಳ ಆಧಾರದ ಮೇಲೆ ಓಲಾ ಕ್ಯಾಬ್ ಸೇವೆಗಳನ್ನು ಪುನಾರಂಭಿಸಿದ್ದರೂ, ಇನ್ನೂ ಹಲವು ನಗರಗಳಲ್ಲಿ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಜನರು ಮೊದಲಿನಂತೆ ಸಿನಿಮಾ ಹೊಟೇಲ್ ಎಂದು ಓಡಾಡುತ್ತಿಲ್ಲ. ಅಷ್ಟೇ ಅಲ್ಲ ಕ್ಯಾಬ್ ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ, ಜೊತೆಗೆ ಒಂದು ಕ್ಯಾಬ್ ನಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಷರತ್ತು ಬದ್ಧ ಅನುಮತಿಯನ್ನು ಸರಕಾರ ನೀಡಿದೆ.