ಅತ್ಯಂತ ಪ್ರಾಚೀನ ಮತ್ತು ಅತ್ಯುತ್ಕೃಷ್ಟ ಔಷಧ ಸಸ್ಯ ಅತ್ತಿಯೆಂಬ ವಿಸ್ಮಯದ ಕಿರುಮಾಹಿತಿ
ಅತ್ತಿಯು ವೇದಕಾಲದಿಂದಲೂ ಬಳಕೆಯಲ್ಲಿರುವ ಒಂದು ಅದ್ಭುತ ಮೂಲಿಕಾ ಮರ. ಔಷಧೀಯ ಗುಣಗಳನ್ನು ಹೊಂದಿರುವ ಈ ಅತ್ತಿಯನ್ನು ಹಿಂದೂ ಧಾರ್ಮಿಕ ಯಜ್ಞಯಾಗಾದಿಗಳಲ್ಲೂ ಬಳಸುವ ವಾಡಿಕೆ ನಡೆದುಕೊಂಡು ಬಂದಿದೆ. ಇದರ ರೆಂಬೆಯನ್ನು ನಮ್ಮ ಪೂರ್ವಜರು ಹಲ್ಲುಜ್ಜಲು ಬಳಸುತ್ತಿದ್ದರು. ಆದರೆ ಅತ್ತಿಯ ಹಣ್ಣು ನೋಡಲು ಎಷ್ಟು ಸುಂದರವೋ ಅಷ್ಟೇ ಜಂತುಗಳನ್ನು ಅದರೊಳಗೆ ಕಾಣಬಹುದು.
ಇದಕ್ಕೆ ಸಂಸ್ಕೃತದಲ್ಲಿ ಔದುಂಬರ, ತುಳುವಿನಲ್ಲಿ ಅರ್ತಿ, ಹಿಂದಿಯಲ್ಲಿ ಗೂಲರ್, ಇಂಗ್ಲೀಷ್ ನಲ್ಲಿ ಕ್ಲಸ್ಟರ್ ಫಿಗ್ ಎಂದೂ ಕರೆಯುತ್ತಾರೆ. ಅಪುಷ್ಪ, ಜಂತುಫಲ, ಸದಾಫಲ, ಶ್ವೇತವಲ್ಕಲ, ಕ್ಷೀರವೃಕ್ಷ, ಕ್ರಿಮಿಕಂಠ, ಬ್ರಹ್ಮವೃಕ್ಷ, ಹರಿತಾಕ್ಷ, ಹೇಮದುಗ್ಧ, ಶೀತಫಲ, ಸುಚಕ್ಷು, ಯಜ್ಞಫಲ ಎಂಬುದು ಅತ್ತಿಯ ಪರ್ಯಾಯ ಪದಗಳು. ಅತ್ಯಂತ ಜನಪ್ರಿಯವಾಗಿರುವ ಈ ಅತ್ತಿಮರವು 9 ರಿಂದ 12 ಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಎಲೆ, ಫಲ, ಕಾಯಿ, ತೊಗಟೆಯಿಂದ ಬಿಳಿಬಣ್ಣದ ಅಂಟಾದ ದ್ರವ ಹೊರಬರುತ್ತದೆ. ಕಾಯಿ ಹಸಿರಾಗಿದ್ದು ಹಣ್ಣಾದಾಗ ಕೆಂಪುಬಣ್ಣಕ್ಕೆ ತಿರುಗುತ್ತದೆ. ಹಣ್ಣಿನ ಒಳಗಡೆ ಇರುವೆಗಳಿರುತ್ತವೆ. ಹಣ್ಣಿನ ಒಳಗಡೆ ನೂರಾರು ಸಣ್ಣ ಸಣ್ಣ ಬೀಜಗಳಿರುತ್ತವೆ. ಭಾರತ ಹಾಗೂ ಶ್ರೀಲಂಕಾಗಳಲ್ಲಿ ಇದು ಅತೀ ಹೆಚ್ಚಾಗಿ ಬೆಳೆಯುತ್ತವೆ.
ಇನ್ನು ಈ ಅತ್ತಿಯಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಉದುಂಬರ, ಕಾಕ ಉದುಂಬರ, ನದ್ಯೋದುಂಬರ. ಇವನ್ನು ಸಸ್ಯಶಾಸ್ತ್ರದಲ್ಲಿ ಫಿಕಸ್ ಗ್ಲೋಮೆರೇಟಾ, ಫಿಕಸ್ ಹಿಸ್ಪಿಡಾ, ಫಿಕಸ್ ಕರಿಕಾ ಎಂದು ಕರೆಯುತ್ತಾರೆ. ಈ ಮರದ ತೊಗಟೆ, ಕಾಯಿ, ಹಣ್ಣು, ಬೇರು ಔಷಧೀಯ ಅಂಶಗಳನ್ನು ಒಳಗೊಂಡಿರುತ್ತವೆ.
ಇದರ ಉಪಯೋಗಗಳತ್ತ ನೋಡುವುದಾದರೆ, ಮಧುಮೇಹ ಸಮಸ್ಯೆಯಿರುವವರು ಅತ್ತಿ ಹಣ್ಣು ಮತ್ತು, ನೇರಳೆ ಹಣ್ಣಿನ ಬೀಜದ ಚೂರ್ಣವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಅತ್ತಿಯ ತೊಗಟೆಯ ಭಸ್ಮವನ್ನು ಜೇನುತುಪ್ಪ ಮತ್ತು ತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಇದರ ಎಲೆ, ಫಲ ಮತ್ತು ಚಕ್ಕೆಯ ಚೂರ್ಣಕ್ಕೆ ಸಮಾನ ಪ್ರಮಾಣದಷ್ಟು ಜ್ಯೇಷ್ಠಮಧು ಚೂರ್ಣವನ್ನು ಸೇರಿಸಿ ಅದಕ್ಕೆ ಅತ್ತಿ ಎಲೆಗಳ ಸರ ಸೇರಿಸಿ ಸೇವಿಸುವುದರಿಂದ ಕೆಮ್ಮು ಮತ್ತು ಉಬ್ಬಸ ರೋಗಗಳು ಗುಣವಾಗುವುದು. ಅತ್ತಿಯ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಅತಿಸಾರ ರೋಗವು ನಿವಾರಣೆಯಾಗುತ್ತದೆ. ಅತ್ತಿಹಣ್ಣನ್ನು ತಿನ್ನುವುದರಿಂದ ಅಶಕ್ತತೆ ಮತ್ತು ಸ್ನಾಯುಗಳ ದೌರ್ಬಲ್ಯ ನಿವಾರಣೆಯಾಗುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು