ಬೆಂಗಳೂರು : ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಪ್ರಖ್ಯಾತಿ ಪಡೆದ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಲಾಕ್ ಡೌನ್ ಕಂಟಕವಾಗಿ ಕಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ನೇಮಕವಾಗಿ ಎರಡು ತಿಂಗಳು ಕಳೆದಿವೆ. ಆದರೂ ಅಧಿಕಾರ ಸ್ವೀಕರಿಸುವ ಸೌಭಾಗ್ಯ ಮಾತ್ರ ಕೂಡಿ ಬರುತ್ತಿಲ್ಲ. ಲಾಕ್ ಡೌನ್ ಕಾರಣಕ್ಕಾಗಿ ಪದೇ ಪದೆ ಮುಂದೂಡಿಕೆಯಾಗ್ತಾನೆ ಇದೆ. ಲಾಕ್ ಡೌನ್ ಇರುವ ಕಾರಣಕ್ಕೆ ಅಧಿಕಾರ ಸ್ವೀಕಾರ ಮಾಡಲು ಆಗಿರಲಿಲ್ಲ. ಲಾಕ್ ಡೌನ್ ಸಡಿಲಿಕೆಗೊಂಡ ಬಳಿಕ ಮತ್ತೆ ಅಧಿಕಾರ ಸ್ವೀಕಾರ ಮಾಡಲು ಕಾಂಗ್ರೆಸ್ ದಿನಾಂಕ ಗುರುತಿಸಿಕೊಂಡಿತ್ತು. ಅದರ ಪ್ರಕಾರ ಮೇ 31 ರಂದು ಅಧಿಕಾರ ಸ್ವೀಕಾರ ಮಾಡಲು ಸಿದ್ದತೆ ನಡೆದಿತ್ತು. ಇದೆ ಹೊತ್ತಿಗೆ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಮೇ 31 ರಂದು ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮತ್ತೆ ಮುಂದೂಡಲಾಗಿದೆ. ಸಂಪೂರ್ಣ ಲಾಕ್ ಡೌನ್ ನಿಂದಾಗಿ ಕ್ಯಾನ್ಸಲ್ ಆದ ಕಾರ್ಯಕ್ರಮ ಜೂನ್ 7 ರಂದು ನಡೆಸಲು ಕಾಂಗ್ರೆಸ್ ಸಿದ್ದತೆ ನಡೆಸಿತ್ತು. ದುರಂತವೆಂದರೆ ಜೂನ್ 7 ಸಹ ಭಾನುವಾರವಾಗಿದೆ. ಆದ್ದರಿಂದ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಮತ್ತೆ ಕಂಟಕ ಎದುರಾಗಿದೆ.
ಯಾಕೆ ಮೇ 31 ಮತ್ತು ಜೂನ್ 7 ರಂದು ಅಧಿಕಾರ ಸ್ವೀಕಾರ ಮಾಡಲು ಸಿದ್ದತೆ ನಡೆದಿತ್ತು ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಘೋಷಣೆ ಆಗಿದ್ದೆ ತಡ ಡಿಕೆಶಿ ಟೆಂಪಲ್ ರನ್ ಮಾಡಿದ್ದರು. ಇದೆ ವೇಳೆ ಅನೇಕ ಶ್ರೀಗಳನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ನೊಣವಿನಕೆರೆ ಅಜ್ಜಯ್ಯ ಮಠದ ಶ್ರೀಗಳು ಮೇ 31 ಮತ್ತು ಜೂನ್ 7 ಈ ಎರಡು ದಿನದಲ್ಲಿ ಅಧಿಕಾರ ಸ್ವೀಕಾರ ಮಾಡಿದರೇ ಒಳ್ಳೆಯದಾಗುತ್ತೆ ಎಂದು ಸಲಹೆ ನೀಡಿದ್ದರು. ಆ ಕಾರಣಕ್ಕೆ ಮೇ 31 ಇಲ್ಲವಾದಲ್ಲಿ ಜೂನ್ 7 ರಂದು ಅಧಿಕಾರ ಸ್ವೀಕಾರ ಮಾಡಲು ಡಿಕೆ ಶಿವಕುಮಾರ್ ಮುಂದಾಗಿದ್ದರು. ಶ್ರೀಗಳ ಮಾತುಗಳನ್ನು ಮೊದಲಿಂದಲೂ ಕೇಳಿಕೊಂಡ ಡಿಕೆ ಶಿವಕುಮಾರ್ ಜೂನ್ 7 ರಂದು ಸರಳ ಕಾರ್ಯಕ್ರಮದ ಮೂಲಕ ಕೆಪಿಸಿಸಿ ಪ್ರೆಸಿಡೆಂಟ್ ಪಟ್ಟಕ್ಕೆ ಏರುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.








