ಮತ್ತೊಮ್ಮೆ ರಂಪಾಟ ಮಾಡಿ ಸುದ್ದಿಯಾದ ಹುಚ್ಚ ವೆಂಕಟ್

ಮಂಡ್ಯ, ಜೂನ್ 9: ಸ್ಯಾಂಡಲ್‌ವುಡ್ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥರಂತೆ ಮೈಸೂರು, ಮಡಿಕೇರಿಯಲ್ಲಿ ಅಲೆದಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.
ಇದೀಗ ಹುಚ್ಚ ವೆಂಕಟ್ ಮಂಡ್ಯದ ಪೆಟ್ರೋಲ್ ಬಂಕ್ ನಲ್ಲಿ ಹಾಗೂ ಶ್ರೀರಂಗಪಟ್ಟಣದ ಜ್ಯೂಸ್ ಅಂಗಡಿಯಲ್ಲಿ ರಂಪಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಪೆಟ್ರೋಲ್ ಬಂಕ್ ಗೆ ತೆರಳಿದ ಹುಚ್ಚ ವೆಂಕಟ್ ತನ್ನ ಕಾರಿಗೆ ಪೆಟ್ರೋಲ್ ಹಾಕುವಂತೆ ಸಿಬ್ಬಂದಿಗಳಿಗೆ ಹೇಳಿದ್ದಾರೆ. ಸಿಬ್ಬಂದಿಗಳು ದುಡ್ಡು ಕೊಡದೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದು, ಪೆಟ್ರೋಲ್ ಹಾಕಿಸಿಕೊಡದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ಹುಚ್ಚ ವೆಂಕಟ್ ಹಠ ಹಿಡಿದಿದ್ದಾರೆ. ಕೊನೆಗೆ ಪೆಟ್ರೋಲ್ ಬಂಕ್ ಮಾಲೀಕರು ಪೊಲೀಸರನ್ನು ಕರೆಸಿದ್ದು, ಅವರು ಹುಚ್ಚ ವೆಂಕಟ್ ಗೆ ಬುದ್ಧಿ ಹೇಳಿದ್ದಾರೆ.

ಬೆಳಗಿನ ಸಮಯ ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಜ್ಯೂಸ್ ಅಂಗಡಿಯೊಂದರಲ್ಲಿ ಕಬ್ಬಿನ ಹಾಲು ಕುಡಿದು ಹಣ ನೀಡಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ ನಡೆಸಿ, ಹೊಡೆದಾಟ ಕೂಡ ಮಾಡಿದ್ದಾರೆ. ಅಲ್ಲಿದ್ದ ಜನರು ಇದನ್ನು ನೋಡಿ ಹುಚ್ಚ ವೆಂಕಟ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಿನ್ನೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿಯೂ ಇಬ್ಬರ ಮೇಲೆ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ.








