ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಆಂಧ್ರದಲ್ಲಿ ಬಿಜೆಪಿಯೊಂದಿಗೆ ಟಿಡಿಪಿ ಹಾಗೂ ಜೆಎಸ್ಪಿ ಒಂದಾಗಿವೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಎನ್ ಡಿಎ ಮೈತ್ರಿಕೂಟದೊಂದಿಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷಗಳು (ನಟ ಪವನ್ ಕಲ್ಯಾಣ್ ಪಕ್ಷ) ಮೈತ್ರಿ ಮಾಡಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಬಿಜೆಪಿ, ಟಿಡಿಪಿ ಮತ್ತು ಜೆಎಸ್ಪಿ ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲು ಸಿದ್ಧವಾಗಿವೆ ಎಂದು ಮೂರೂ ಪಕ್ಷಗಳು ಹೇಳಿಕೆ ನೀಡಿವೆ. 10 ವರ್ಷಗಳಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಟಿಡಿಪಿ ಮತ್ತು ಬಿಜೆಪಿ ಬಹಳ ಹಳೆಯ ಸಂಬಂಧ ಹೊಂದಿದೆ. ಟಿಡಿಪಿ ಮತ್ತು ಜೆಎಸ್ಪಿ ಜೊತೆಗೂಡುವುದು ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಜೆಪಿ ಮತ್ತು ಟಿಡಿಪಿ ಒಟ್ಟಿಗೆ 1996 ರಲ್ಲಿ ಮೈತ್ರಿಯಲ್ಲಿದ್ದರು. 2014 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಿದ್ದವು. ಆಂಧ್ರಪ್ರದೇಶದಲ್ಲಿ 2014 ರ ಸಾರ್ವತ್ರಿಕ ಮತ್ತು ವಿಧಾನಸಭಾ ಚುನಾವಣೆಗಳನ್ನು ಜೆಎಸ್ಪಿ ಬೆಂಬಲಿಸಿತ್ತು ಎನ್ನಲಾಗಿದೆ. ಸದ್ಯದಲ್ಲಿಯೇ ಸೀಟು ಹಂಚಿಕೆ ಕಾರ್ಯ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.