ಅದು ಯಾವುದೇ ಕ್ಷೇತ್ರವಾಗಲಿ, ಯಾವುದೇ ಕಾರ್ಯವಾಗಲಿ, ನಾಳೆಯ ದಿನ ನಮಗೆ ಗೆಲುವು ಸಿಗಬೇಕಂದ್ರೆ ಇವತ್ತು ನಾವು ಮಾಡುವ ತಯಾರಿಗಳು, ತಯಾರಿಯೊಳಗಿನ ಸತತ ಪ್ರಯತ್ನಗಳಷ್ಟೇ ಕಾರಣ. ಜೊತೆಗೆ ನಾವು ಮಾಡುವ ಒಳ್ಳೆಯ ಪ್ರಯತ್ನಗಳಿಗೊಂದಿಷ್ಟು ಪ್ರಶಂಸೆಯ ಮಾತುಗಳು ಸಹ ಬಂದ್ರೆ, ಅದು ನಮ್ಮನ್ನು ಗೆಲುವಿನೆಡೆಗೆ ಬಹುಬೇಗನೆ ಕರೆದೊಯ್ಯುತ್ತದೆ.
ಸಿನಿಮಾರಂಗದಲ್ಲಿ ಈಗ ಅಂತಹುದೇ ಪ್ರಯತ್ನಗಳ ನೋಡಿ, ಅದು ಉತ್ತಮವಾಗಿದ್ರೆ ಅವರಿಗಾಗಿ ತರಹೇವಾರಿ ವಿಭಾಗದಲ್ಲಿ ಪ್ರಶಸ್ತಿ, ಪ್ರಶಂಸೆಗಳನ್ನು ನೀಡಿ ಅವರ ಗೆಲುವಿಗಾಗಿನ ನಡೆಗೆ ಉತ್ಸಾಹವನ್ನು ತರಿಸುವಂತ ಕೆಲಸವನ್ನು “ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ” ಮಾಡುತ್ತಿದೆ.
ಹೌದು, ಸಿನಿಮಾ ಮಾಡಬೇಕೆಂಬ ಕನಸಿಟ್ಟುಕೊಂಡು ಅದರ ಪೂರ್ವ ತಯಾರಿಯಾಗಿ ಅದೆಷ್ಟೊ ಜನ ಕಿರುಚಿತ್ರಗಳನ್ನು ಮಾಡುತ್ತಾರೆ. ಅದರಲ್ಲಿ ಕೆಲವೊಂದಿಷ್ಟು ಉತ್ತಮವಾದ ಕಿರುಚಿತ್ರಗಳಿಗೆ ಬೇರೆ ಬೇರೆ ಶಾರ್ಟ್ ಫಿಲಂ ಕಾಂಪಿಟೇಷನ್‌ಗಳಿಂದ ಪ್ರಶಂಸೆ, ಪುರಸ್ಕಾರಗಳು ಸಹ ಸಿಗುತ್ತವೆ. ಇದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ “ಸುದಾಮ ಟಾಕೀಸ್” ಎಂಬ ಸಿನಿಮಾ ತಂಡವೊಂದು ತಮ್ಮ ಪ್ರೊಡಕ್ಷನ್ ಅಡಿಯಲ್ಲಿ “ಆ ಒಂದು ದಿನ” ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿ ಬೇರೆ ಬೇರೆ ಕಾಂಪಿಟೇಷನ್‌ಗಳಿಗೆ ಕಳುಹಿಸಿ ಹೆಚ್ಚೆಚ್ಚು ಪ್ರಶಂಸೆಗಳನ್ನಾಹ್ವಿನಿಸುತ್ತಿದೆ.
ಆ ಸಾಲಿನಲ್ಲಿ “ಆ ಒಂದು ದಿನ” ಕಿರುಚಿತ್ರವು ಕ್ಲಬ್ಬಿ ಶಾರ್ಟ್ ಫಿಲಂ ಫೆಸ್ಟಿವಲ್‌ನಲ್ಲಿ ಅಂತಿಮ ಸುತ್ತಿನವರೆಗೆ ಆಯ್ಕೆಯಾಗಿ ಅಲ್ಲಿಂದ ಸಹ ಉತ್ತಮ ಪ್ರಶಂಸೆಗಳನ್ನು ಸ್ವೀಕರಿಸಿತ್ತು. ಈಗ “ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ” ದಲ್ಲಿ ಸ್ಪರ್ಧೆಯಲ್ಲದ ವಿಭಾಗಕ್ಕೆ ಆಯ್ಕೆಗೊಂಡು ಇದೇ ಆಗಸ್ಟ್ 13 ರಿಂದ ಆಗಸ್ಟ್ 16 ರವರೆಗೆ ಆನ್‌ಲೈನ್ ಸ್ಕ್ರೀನಿಂಗ್ ಆಗಲಿದೆ. ಆಗ ಸಾಮಾನ್ಯ ಪ್ರೇಕ್ಷಕರು ಈ ಕಿರುಚಿತ್ರದ ಜೊತೆಗೆ ಇನ್ನೂ ಅನೇಕ ಒಳ್ಳೆಯ ಕಿರುಚಿತ್ರಗಳನ್ನು ನೋಡಬಹುದಾಗಿದೆ.
ಮೂವರು ಅಪರಿಚಿತರ ನಡುವೆ ನಡೆಯುವ ಘಟನೆಗಳಾಧಾರಿತ ಭಾವನಾತ್ಮಕ ಕಥೆಯೇ “ಆ ಒಂದು ದಿನ” ಕಿರುಚಿತ್ರದ ಒನ್‌ಲೈನ್. ಇನ್ನೂ ಈ ಕಿರುಚಿತ್ರವನ್ನು ಮೈಸೂರಿನವರೇ ಆದ ಪ್ರಸನ್ನ ಕುಮಾರ್ ಎಂಬುವವರು ರಚಿಸಿ, ನಟಿಸಿ ಜೊತೆಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ಈಗಾಗಲೇ ಇವರು ಕನ್ನಡದ ಜನಪ್ರಿಯ ಸಿನಿಮಾಗಳಾದ “ತಿಥಿ”, “ಕಿರಗೂರಿನ ಗಯ್ಯಾಳಿಗಳು”, “ಅಲ್ಲಮ”, ಕಳೆದ ವಾರ ಓಟಿಟಿಯಲ್ಲಿ ಬಿಡುಗಡೆಯಾದ “ಫ್ರೆಂಚ್ ಬಿರಿಯಾನಿ” ಹಾಗು ಬಿಡುಗಡೆಗೆ ಸಿದ್ಧವಾಗಿರುವ “ಹಳೆಯ ವಿಳಾಸಗಳು” ಎಂಬಂತ ಐದು ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವವನ್ನು ಸಹ ಹೊಂದಿದ್ದಾರೆ. ಹಾಗು ಇವರ ಜೊತೆಗೆ ಮುಖ್ಯಭೂಮಿಕೆಯಲ್ಲಿ ರಂಗಭೂಮಿಯ ಪ್ರತಿಭೆಗಳಾದ ಗೀತಾ, ಲಾವಣ್ಯ ಹಾಗು ಶ್ರೀಧರ್ ಎಂಬುವವರು ಅಭಿನಯಿಸಿದ್ದಾರೆ. ಉಳಿದಂತೆ ಕನ್ನಡ ಚಿತ್ರರಂಗದ ಹೆಸರಾಂತ ಛಾಯಾಗ್ರಾಹಕರಾದ ಬಿ ಸುರೇಶ್‌ಬಾಬು ಅವರೊಂದಿಗೆ ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿ ಅನುಭವವುಳ್ಳ ದಿವಾಕರ್ ಕೆನ್ ರವರ ಛಾಯಾಗ್ರಹಣ ಹಾಗು ವಿಜಯ್ ರಾಜ್ ರವರ ಹಿನ್ನೆಲೆ ಸಂಗೀತ ಈ ಕಿರುಚಿತ್ರಕ್ಕಿದೆ. ಸುತನ್ ದಿಲೀಪ್(“ಸುದಾಮ ಟಾಕೀಸ್” ಮುಖ್ಯಸ್ಥ) ಎಂಬ ಮತ್ತೊಬ್ಬ ರಂಗಭೂಮಿ ಕಲಾವಿದ ಈ ಕಿರುಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಂಕಲನವನ್ನು ಸಹ ಮಾಡಿದ್ದಾರೆ. ಇವರೊಂದಿಗೆ ಸಹ ನಿರ್ಮಾಣದಲ್ಲಿ ಪ್ರಸನ್ನ ಕುಮಾರ್, ಚೇತನ್ ಆಚಾರ್ ಹಾಗು ಜಯಶೀಲ್ ಹೆಚ್ ಗೌಡ್ರು ಮೂವರು ಸಾಥ್ ನೀಡಿದ್ದಾರೆ.








