`ಸರಿಯಾಗಿ ಕೇಳಿ’ | ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಈ ಸಮಸ್ಯೆ ಪಕ್ಕಾ..!!
2050 ರ ವೇಳೆಗೆ ನಾಲ್ವರಲ್ಲಿ ಒಬ್ಬರಿಗೆ ಸಮಸ್ಯೆ
ಮುಂದಿನ 30 ವರ್ಷಗಳಲ್ಲಿ 250 ಕೋಟಿ ಜನರಿಗೆ ಶ್ರವಣ ಸಮಸ್ಯೆ
ಜಿನೀವಾ : ಶ್ರವಣ ಸಮಸ್ಯೆ ( ಕಿವುಡು) ಸಮಸ್ಯೆಯ ಮೇಲೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಸಂಚಲನ ವಿಷಯಗಳನ್ನು ಬಹಿರಂಗಪಡಿಸಿದೆ. 2050 ರ ವೇಳೆಗೆ ವಿಶ್ವಾದ್ಯಂತ ನಾಲ್ಕು ಜನರಲ್ಲಿ ಒಬ್ಬರಿಗೆ ಶ್ರವಣ ಸಮಸ್ಯೆ ಉಂಟಾಗುತ್ತದೆ ಎಂದು ಡಬ್ಲ್ಯುಎಚ್‍ಒ ಘೋಷಣೆ ಮಾಡಿದೆ.
ಸದ್ಯ ವಿಶ್ವದಾದ್ಯಂತ ಐದು ಜನರಲ್ಲಿ ಒಬ್ಬರಿಗೆ ಶ್ರವಣ ಸಮಸ್ಯೆ ಇದೆ. ಆದರೆ ಮುಂದಿನ ಮೂರು ದಶಕಗಳಲ್ಲಿ ಈ ಸಂಖ್ಯೆ 1.5 ಪಟ್ಟು ಹೆಚ್ಚಾಗಬಹುದು. ಒಂದು ವರದಿ ಪ್ರಕಾರ 2019ರಲ್ಲಿ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 160 ಕೋಟಿ ಇದ್ದು, ಮುಂದಿನ ಮೂರು ದಶಕಗಳಲ್ಲಿ 250 ಕೋಟಿಗೆ ಏರಿಕೆಯಾಗಬಹುದು ಎಂದು ಡಬ್ಲ್ಯುಎಚ್‍ಒ ಎಚ್ಚರಿಸಿದೆ.
ಶ್ರವಣ ಸಮಸ್ಯೆಯ ಮೊಟ್ಟ ಮೊದಲ ಜಾಗತಿಕ ವರದಿಯ ಪ್ರಕಾರ, ಸಾಂಕ್ರಾಮಿಕ ರೋಗಗಳು, ಶಬ್ದ ಮಾಲಿನ್ಯ ಮತ್ತು ಮಾನವನ ಜೀವನಶೈಲಿಯ ಬದಲಾವಣೆಗಳು ಶ್ರವಣ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಆದಾಗ್ಯೂ, ಸೋಂಕು, ದೊಡ್ಡ ಶಬ್ದಗಳನ್ನು ತಡೆಯುವುದು ಮತ್ತು ಅನುವಂಶೀಯವಾಗಿ ಬರುವ ಶ್ರವಣ ಸಮಸ್ಯೆಯನ್ನ ತಡೆಯಲು ಮತ್ತು ಅದರ ಚಿಕಿತ್ಸೆಗಾಗಿ ಡಬ್ಲ್ಯುಎಚ್‍ಒ
ಒಂದು ಪ್ಯಾಕೇಜ್ ಅನ್ನು ಸಹ ಪ್ರಸ್ತಾಪಿಸಿದೆ. ಪ್ರತಿ ವರ್ಷ ಕೆಲವು ಟ್ರಿಲಿಯನ್ ಡಾಲರ್ಗಳನ್ನು ಖರ್ಚು ಮಾಡಿದರೂ, ಶ್ರವಣ ಸಮಸ್ಯೆಯನ್ನು ತಪ್ಪಿಸುವಲ್ಲಿ ವಿಫಲವಾಗುತ್ತಿದ್ದೇವೆ ಎಂದು ಡಬ್ಲ್ಯುಎಚ್‍ಒ ವಿವರಿಸಿದೆ.
ಅಲ್ಲದೆ ಡಬ್ಲ್ಯುಎಚ್‍ಒ ಅಂದಾಜಿಸಿದಂತೆ 250 ಕೋಟಿ ಜನರಲ್ಲಿ 70 ಕೋಟಿ ಜನರು ಹೆಚ್ಚು ಗಂಭೀರ ಸಮಸ್ಯೆಯನ್ನು ಎದುರಿಸುತ್ತಾರೆ ಮತ್ತು ಅವರಿಗೆ ಚಿಕಿತ್ಸೆ ಅತ್ಯವಸರ ಎಂದು ಡಬ್ಲ್ಯುಎಚ್‍ಒ ಸ್ಪಷ್ಟಪಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಶಬ್ದಗಳನ್ನು ತಡೆಗಟ್ಟುವುದರ ಜೊತೆಗೆ, ಶ್ರವಣ ಸಮಸ್ಯೆಗೆ ಕಾರಣವಾಗುವ ಮೆನಿಂಜೈಟಿಸ್‍ನಂತಹ ಕಾಯಿಲೆಗಳಿಗೆ ಲಸಿಕೆಗಳನ್ನು ಹೆಚ್ಚಿಸುವಂತಹ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಒಳಗೊಂಡ ಬೃಹತ್ ಪ್ಯಾಕೇಜ್ ಅನ್ನು ಅದು ಪ್ರಸ್ತಾಪಿಸಿದೆ.
ಅಲ್ಲದೆ ಕ್ರಮಬದ್ಧವಾದ ಸ್ಕ್ರೀನಿಂಗ್ ಅನ್ನು ಸಹ ಡಬ್ಲ್ಯುಎಚ್‍ಒ ಶಿಫಾರಸು ಮಾಡಿದ್ದು, ಇದರಿಂದ ಮಕ್ಕಳಲ್ಲಿ, ಶೇಕಡಾ 60 ರಷ್ಟು ಪ್ರಕರಣಗಳಲ್ಲಿ ಶ್ರವಣ ಸಮಸ್ಯೆಯನ್ನು ತಡೆಯಬಹುದು ಎಂದು ತಿಳಿಸಿದೆ.