ಹೊಸದಿಲ್ಲಿ, ಜೂನ್ 1 : ಇಂದಿನಿಂದ (ಜೂನ್ 1) ದೇಶದಾದ್ಯಂತ ಒನ್ ನೇಶನ್ ಒನ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರಲಿದೆ. ಸುಮಾರು 20 ರಾಜ್ಯಗಳಲ್ಲಿ ಇಂದಿನಿಂದ ಜಾರಿಗೆ ಬರಲಿರುವ ಈ ಯೋಜನೆಯಿಂದ 67 ಕೋಟಿ ಬಡ ಜನರಿಗೆ ಲಾಭವಾಗಲಿದೆ. ಕೇಂದ್ರ ಸರ್ಕಾರದ ಒನ್ ನೇಶನ್-ಒನ್ ರೇಷನ್ ಕಾರ್ಡ್ ಯೋಜನೆಯಿಂದ ದೇಶದ ಯಾವುದೇ ರಾಜ್ಯಕ್ಕೆ ಸಂಬಂಧ ಪಟ್ಟಿದ್ದರೂ ಕೂಡ ಇತರ ರಾಜ್ಯಗಳಲ್ಲಿಯೂ ಕೂಡ ಸರ್ಕಾರಿ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ. ದೇಶಾದ್ಯಂತ ಜೂನ್ 1ರಿಂದ ಒನ್ ನೇಶನ್-ಒನ್ ರೇಷನ್ ಕಾರ್ಡ್ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕರಿಗೆ ಕೇವಲ ಒಂದು ಪಡಿತರ ಚೀಟಿ ಇದ್ದು, ಅವರು ದೇಶದ ಯಾವುದೇ ಭಾಗದಲ್ಲಿರುವ ಅಥವಾ ಮೂಲೆಯಲ್ಲಿರುವ ಸರ್ಕಾರಿ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ. ಇದರಿಂದ ಪಡಿತರ ಕಾರ್ಡ್ ಹೊಂದಿರುವವರಿಗೆ ಈ ಯೋಜನೆಯಡಿಯಲ್ಲಿ ಮೂರು ರೂ. ದರದಲ್ಲಿ ಐದು ಕಿಲೋ ಅಕ್ಕಿ ಹಾಗೂ ಗೋಧಿ ಎರಡು ರೂ.ದರದಲ್ಲಿ ಸಿಗಲಿದೆ. ರೇಶನ್ ಕಾರ್ಡ್ ಎರಡು ಭಾಷೆಗಳಲ್ಲಿ
ಪ್ರಕಟವಾಗಲಿದ್ದು, ಒಂದು ಸ್ಥಳೀಯ ಭಾಷೆ ಮತ್ತು ಎರಡನೆಯದು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಜಾರಿಗೊಳ್ಳಲಿದೆ. ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 20 ಲಕ್ಷ ಕೋಟಿ ರೂ.ಬೃಹತ್ ಪ್ಯಾಕೇಜ್ ನ ಮಾಹಿತಿ ನೀಡುವಾಗ ಈ ಯೋಜನೆಯ ಕುರಿತು ಉಲ್ಲೇಖಿಸಿದ್ದರು. ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ, ಅವರಿಗೂ ಕೂಡ 5 ಕೆ.ಜಿ ಗೋಧಿ ಅಥವಾ ಅಕ್ಕಿ ಹಾಗೂ ಒಂದು ಕೆ.ಜಿ ಬೆಳೆ ನೀಡಲಾಗುವುದು ಎಂದು ಸಚಿವೆ ಹೇಳಿದ್ದರು. ಇದರಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಇದರಿಂದ ಭಾರಿ ಸಹಾಯವಾಗಲಿದೆ ಎಂದು ಹೇಳಿದ್ದರು. ಈ ಯೋಜನೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 3,500 ಕೋಟಿ ರೂ. ಹೊರೆ ಬೀಳಲಿದ್ದು, ಮುಂದಿನ ಎರಡು ತಿಂಗಳುಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದಿದ್ದರು.








