ಬೆಂಗಳೂರು: ಪೋಷಕರು ಹಾಗೂ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್‍ಕೆಜಿ, ಯುಕೆಜಿ ಹಾಗೂ 1ನೇ ತರಗತಿಯಿಂದ 5ನೇ ತರಗತಿವರೆಗೆ ಆನ್‍ಲೈನ್ ಕ್ಲಾಸ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.
ಆನ್‍ಲೈನ್ ಕ್ಲಾಸ್ ಮುಂದುವರೆಸಬೇಕೇ ಬೇಡವೇ ಎಂಬುದರ ಕುರಿತು ಸಚಿವ ಸುರೇಶ್‍ಕುಮಾರ್ ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಆನ್‍ಲೈನ್ ಕ್ಲಾಸ್ ನಡೆಸಲು ಅವಕಾಶ ನೀಡದಂತೆ ತಜ್ಞರು ಸಲಹೆ ನೀಡಿದ್ದಾರೆ. ಎಲ್ಲಾ ಪೋಷಕರ ್ಲರ ಬಳಿಯೂ ಸ್ಮಾರ್ಟ್‍ಪೋನ್, ಲ್ಯಾಪ್‍ಟಾಪ್‍ಗಳಿಲ್ಲ. ಆನ್‍ಲೈನ್ ಕ್ಲಾಸ್ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ದಂಧೆ ಮಾಡುತ್ತಿವೆ. ಇಂದಿನಿಂದಲೇ ಆನ್‍ಲೈನ್ ಕ್ಲಾಸ್‍ಗಳಿಗಾಗಿ ಪಡೆಯುತ್ತಿದ್ದ ಹಣ ಪಡೆಯುವುದನ್ನು ನಿಲ್ಲಿಸಬೇಕು. ಜತೆಗೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾನಸಿಕ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಶುಲ್ಕ ಹೆಚ್ಚಳ ಮಾಡುವಂತಿಲ್ಲ
ಕೊರೊನ ಬಿಕ್ಕಟ್ಟಿನ ಈ ವರ್ಷ ಯಾವುದೇ ಶಾಲೆಗಳು ಮಕ್ಕಳ ಪ್ರವೇಶ ಶುಲ್ಕ ಹಾಗೂ ಮಾಸಿಕ ಶುಲ್ಕವನ್ನು ಹೆಚ್ಚಿಸಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಆದರೆ, ಶಿಕ್ಷಣ ಸಂಸ್ಥೆಗಳು ಶುಲ್ಕ ಕಡಿತ ಮಾಡಲು ಅವಕಾಶ ನೀಡಲಾಗಿದೆ.
ಸಿಲಬಸ್ ಕಡಿಮೆ ಮಾಡಲು ಚಿಂತನೆ
ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಪುನಾರಂಭವಾಗುವುದು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಿಲಬಸ್(ಪಠ್ಯಕ್ರಮ)ವನ್ನು ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಪಠ್ಯಕ್ರಮವನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ಇದೆ. ವಿದ್ಯಾರ್ಥಿಗಳ ಮುಂದಿನ ತರಗತಿಗಳಿಗೆ ಪಠ್ಯದ ಕೊರತೆಯಾಗದಂತೆ ಹಾಗೂ ಸೀಮತ ಅವಧಿಗೆ ಬೇಕಾಗುವ ಪಠ್ಯಕ್ರಮ ಒಳಗೊಳ್ಳುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದಿದ್ದಾರೆ.
ಜುಲೈ 1ರಿಂದ ಶಾಲೆ ಆರಂಭ ಇಲ್ಲ
ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಆಗಷ್ಟ್ 15ರ ಬಳಿಕವೇ ಶಾಲೆಗಳ ಪ್ರಾರಂಭದ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ. ಹೀಗಾಗಿ ಜುಲೈ 1ರಿಂದ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸುವುದಿಲ್ಲ. ಏನೇ ಇದ್ದರೂ ಆಗಷ್ಟ್ 15ರ ನಂತರವೇ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.








