ಗದಗ: ಕೂಲಿ ನಾಲಿ ಮಾಡಿಕೊಂಡು ಪ್ರತಿ ದಿನದ ಬದುಕು ಸಾಗಿಸುತ್ತಾ ಮಕ್ಕಳಿಗೆ ಕೈಲಾದಷ್ಟು ಕಲಿಸುವ ಬಡ ಕುಟುಂಬ. ಆದ್ರೆ ಕೊರೊನಾ ಮಾಹಾಮಾರಿಯಿಂದಾಗಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲೇ ಯಾವ ಶಾಲೆಗಳ ಬಾಗಿಲು ತೆಗೆದಿಲ್ಲ. ಹೀಗಾಗಿ ಬಹುತೇಕ ಶಾಲೆಗಳು ಆನ್‍ಲೈನ್ ಶಿಕ್ಷಣದ ಮೊರೆ ಹೋಗಿವೆ.
ಆದರೆ, ಆನ್‍ಲೈನ್ ಶಿಕ್ಷಣ ಪಡೆಯಲಾಗದ ಅದೆಷ್ಟೋ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಚಂದನ ಟಿವಿ ಮೂಲಕ ಸೇತುಬಂಧ ಕಾರ್ಯಕ್ರಮದಡಿ ಪಾಠ ಪ್ರವಚನ ಮಾಡಿಸುತ್ತಿದೆ. ಆದರೆ, ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವ ಅದೆಷ್ಟೋ ಕುಟುಂಬಗಳು ಟಿ.ವಿಯ ಮುಖವನ್ನೇ ನೋಡಿಲ್ಲ. ಹೀಗಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆನ್‍ಲೈನ್ ಶಿಕ್ಷಣವನ್ನು ಪಡೆಯಲಾಗದ ಸ್ಥಿತಿ ಗ್ರಾಮೀಣ ಪ್ರದೇಶದ ಮಕ್ಕಳದ್ದಾಗಿದೆ.
ಗದಗ್ ಜಿಲ್ಲೆಯಲ್ಲಿ ತಾಯಿಯೊಬ್ಬರು ಮಕ್ಕಳಿಗಾಗಿ ತಾಳಿಯನ್ನೇ ಅಡವಿಟ್ಟು ಟಿ.ವಿ ಖರೀದಿಸಿದ ಸಂಗತಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ಟಿ.ವಿಗಾಗಿ ತಾಳಿ ಅಡವಿಟ್ಟ ತಾಯಿ..!
ಆನ್‍ಲೈನ್ ಪಾಠಕ್ಕಾಗಿ ತಾಯಿಯೊಬ್ಬರು ತನ್ನ ಚಿನ್ನದ ತಾಳಿಯನ್ನ ಅಡವಿಟ್ಟು ಮಕ್ಕಳಿಗಾಗಿ ಟಿವಿ ತಂದುಕೊಟ್ಟ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ನಡೆದಿದೆ.
ಕಸ್ತೂರಿ ಎಂಬುವರ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ 8 ನೇ ತರಗತಿಯಲ್ಲಿ, ಇನ್ನೋರ್ವ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದ್ರೆ ಈಗ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸೇತುಬಂಧ ಪಾಠವನ್ನ ಕೇಳಲು ಶಿಕ್ಷಕರು ಪ್ರತಿದಿನ ಫೋನ್ ಮಾಡಿ ಟಿವಿ ನೋಡಿ ಅಂತ ಹೇಳ್ತಿದ್ರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಆದರೆ, ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಾಠ ಕೇಳಲು ಆಗುತ್ತಿರಲಿಲ್ಲ. ಹೀಗಾಗಿ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಇದರಿಂದ ಮನನೊಂದ ತಾಯಿ ಟಿ.ವಿಯೊಂದನ್ನ ಖರೀದಿಸಲೇಬೇಕು ಅಂತ ವಿಚಾರ ಮಾಡ್ತಾರೆ.
ಮೊದಲೇ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಕೈಯಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದ ತಾಯಿಗೆ, ಮಕ್ಕಳ ಗೋಳು ನೋಡಲು ಆಗಲಿಲ್ಲ. ಹೀಗಾಗಿ ಒಂದು ದಿಢೀರ್ ನಿರ್ಧಾರಕ್ಕೆ ಬಂದ ಕಸ್ತೂರಿ, ತನ್ನ ಕೊರಳಲಿದ್ದ ಚಿನ್ನದ ತಾಳಿಯನ್ನ ಅಡವಿಟ್ಟು ಟಿವಿ ಖರೀದಿಸಲು ಯೋಚನೆ ಮಾಡ್ತಾರೆ. ಕೊನೆಗೆ ಅಂದುಕೊಂಡ ನಿರ್ಧಾರದಂತೆ ಒಂದು ಟಿವಿಯನ್ನ ತಂದು ಮಕ್ಕಳಿಗೆ ಓದಲು ಅನುಕೂಲ ಮಾಡಿಕೊಡ್ತಾರೆ.
ಕಸ್ತೂರಿ ಪತಿ ಕೂಲಿ ಕೆಲಸ ಮಾಡ್ತಾರೆ. ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸ್ತಾರೆ. ಆದರೆ ಮೊದಲೇ ಕೂಲಿ ಇಲ್ಲದೆ ಕಂಗಾಲಾಗಿದ್ದ ದಂಪತಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಿದೆ. ಮಕ್ಕಳು ಚೆನ್ನಾಗಿ ಕಲಿತರೆ ಸಾಕು ಎಂಬ ನಿರ್ಧಾರಕ್ಕೆ ಬಂದು 20 ಸಾವಿರ ರೂ.ಗೆ ತಾಳಿ ಅಡವಿಟ್ಟು 14 ಸಾವಿರ ರೂ.ಗೆ ಟಿವಿ ಖರೀದಿ ಮಾಡಿದ್ದಾರೆ. ಅವರ ಈ ಮಹತ್ಕಾರ್ಯಕ್ಕೆ ಮಕ್ಕಳೂ ಸಹ ಚೆನ್ನಾಗಿ ಓದುತ್ತಿದ್ದೇವೆ ಅಂತಿದ್ದಾರೆ.
ಬಂತು ನೆರವಿನ ಭರವಸೆ..!
ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿ.ವಿ ಖರೀದಿಸಿದ ತಾಯಿ ಕಸ್ತೂರಿ ಅವರ ಬಗ್ಗೆ ಬೆಳಿಗ್ಗೆಯಿಂದಲೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ರಾಜ್ಯಾದ್ಯಂತ ಮೆಚ್ಚುಗೆಯ ಜತೆಗೆ ಆರ್ಥಿಕ ನೆರವು ನೀಡುವುದಾಗಿ ಹಲವರು ಮುಂದೆ ಬಂದಿದ್ದಾರೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಕೂಡ ತಾಳಿ ಅಡವಿಟ್ಟು ಟಿ.ವಿ ಖರೀದಿಸಿದ ತಾಯಿ ಕಸ್ತೂರಿ ಕುಟುಂಬಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ತಾಯಿ ಕಸ್ತೂರಿ ಅವರು ಅಡವಿಟ್ಟ ತಾಳಿಯನ್ನು ಬಿಡಿಸಿ ವಾಪಸ್ ಕೊಡಿಸುತ್ತೇವೆ. ಜತೆಗೆ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿದ್ದಾರೆ.