ಬೆಂಗಳೂರು, ಮೇ 21 : ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಜಾರಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ರಾಜ್ಯ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ ಎಲ್ಲಾ ಧಾರ್ಮಿಕ ಕಾರ್ಯಕ್ರಮ, ಜಾತ್ರಾಮಹೋತ್ಸವ, ಯಾಗ -ಹೋಮಗಳನ್ನು ಮುಂದೂಡಲಾಗಿದೆ. ಇದರಿಂದ ಭಕ್ತರಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಲಾಕ್ ಡೌನ್ ನಾಲ್ಕನೇ ಹಂತದಲ್ಲಿ ನಿಗದಿತ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಕಲ್ಪಿಸಲು ಸರಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದು, ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದು ಮೇ 26ರಿಂದ ಅವಕಾಶ ನೀಡಲಾಗುವುದು. ಭಕ್ತರು ಆನ್ ಲೈನ್ ಮೂಲಕ ಹಣ ಪಾವತಿಸಿ ತಮ್ಮ ಹೆಸರಿನಲ್ಲಿ 20 ಸೇವೆ ಪೂಜೆ ಮಾಡಿಸಬಹುದು ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸುವ ನಿರೀಕ್ಷೆ ಇದ್ದು ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ಸೇರಿದಂತೆ 50 ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.