ಕಾಶ್ಮೀರದಲ್ಲಿ ಇಂದು ಭಾರತದ ಬಾವುಟಗಳು ಮಾತ್ರ ಕಾಣುತ್ತಿವೆ – ರಾಜನಾಥ್ ಸಿಂಗ್
ಶ್ರೀನಗರ, ಜೂನ್ 15: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮೊದಲು ಪಾಕಿಸ್ತಾನ ಮತ್ತು ಐಸಿಸ್ ಬಾವುಟಗಳನ್ನು ಹಿಡಿದುಕೊಂಡು ಕಾಶ್ಮೀರ ಆಜಾದ್ ಎಂದು ಘೋಷಣೆ ಕೇಳಿಬರುತ್ತಿದ್ದ ಕಾಶ್ಮೀರದಲ್ಲಿ ಇಂದು ಭಾರತದ ಬಾವುಟಗಳು ಮಾತ್ರ ಕಾಣುತ್ತಿವೆ ಎಂದು ಹೇಳಿದರು.
ಜಮ್ಮು ಜನ ಸಂವಾದ ರಾ ್ಯಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಲ್ಪ ಸಮಯ ತಡೆಯಿರಿ, ಪಾಕ್ ಆಕ್ರಮಿತ ಕಾಶ್ಮೀರದ ಜನರು ಇಷ್ಟರಲ್ಲೇ ಭಾರತಕ್ಕೆ ಬರಬೇಕೆಂದು ಕೇಳುತ್ತಾರೆ ಹೊರತು ಪಾಕಿಸ್ತಾನದ ಆಡಳಿತದಲ್ಲಿ ಇರಬೇಕೆಂದು ಬಯಸುವುದಿಲ್ಲ. ಈ ರೀತಿ ನಡೆದಾಗ ನಮ್ಮ ಸಂಸತ್ತಿನ ಗುರಿ ಮತ್ತು ಉದ್ದೇಶ ಈಡೇರುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿಯಲ್ಲಿ ಜಮ್ಮು-ಕಾಶ್ಮೀರದ ಕೆಟ್ಟ ದಿನಗಳು ದೂರವಾಗಿದ್ದು, ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ್ದು , ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಅತ್ಯಂತ ಪ್ರಮುಖ ಮತ್ತು ಕಠಿಣ ನಿರ್ಧಾರವಾಗಿದೆ ಎಂದು ಹೇಳಿದರು.
ಹಿಂದೆ ಜನಸಂಘದ ಸಮಯದಲ್ಲಿ ನಾವು ಹೇಳಿದಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸರ್ಕಾರ ರಚಿಸಿದ 100 ದಿನಗಳೊಳಗೆ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಲಾಗಿದೆ. ಇದು ಎನ್ ಡಿಎ ಸರ್ಕಾರದ ಬದ್ಧತೆಯನ್ನು ಎದ್ದು ತೋರಿಸುತ್ತಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಭಾರತದ ಕೀರ್ತಿಯನ್ನು ಹೆಚ್ಚಿಸಲು ಕಾರಣರಾಗಿದ್ದಾರೆ. ಈ ಹಿಂದೆ ವಿಶ್ವದ ಬಲಿಷ್ಟ ರಾಷ್ಟ್ರಗಳು ಕಾಶ್ಮೀರ ವಿಚಾರ ಬಂದಾಗ ಪಾಕಿಸ್ತಾನ ಪರ ಮಾತನಾಡುತ್ತಿದ್ದವು. ಆದರೆ ಇಂದು ಎಲ್ಲವೂ ಬದಲಾಗಿದೆ. ವಿಶ್ವದ ಬಲಿಷ್ಟ ರಾಷ್ಟ್ರಗಳು ಭಾರತದ ಪರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಯುತ್ತಿದ್ದು, ಚೀನಾ ಕೂಡ ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಒಲವು ತೋರಿದೆ. ನಮ್ಮ ಸರ್ಕಾರ ಯಾವ ವಿಚಾರವನ್ನು ಕತ್ತಲೆಯಲ್ಲಿಡಲು ಬಯಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದ ರಕ್ಷಣಾ ಸಚಿವರು ದೇಶದ ಪ್ರತಿಷ್ಠೆಯ ವಿಷಯ ಬಂದರೆ ನಮ್ಮ ಸರ್ಕಾರ ರಾಜಿಯಾಗುವುದಿಲ್ಲ ಎಂದರು.
ವಿದೇಶಿ ವಸ್ತುಗಳ ಅಮದು ನಿಲ್ಲಿಸಿ ನಾವೇ ಅವುಗಳನ್ನು ತಯಾರಿಸಿ ಸ್ವಾವಲಂಬಿಯಾಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಭಾರತ ಅಮದು ದೇಶ ಎಂದು ಕರೆಯಿಸಿ ಕೊಳ್ಳದೆ ರಫ್ತು ರಾಷ್ಟ್ರ ಎಂದು ಕರೆಯಿಸಿಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಬಯಕೆ ಎಂದು ರಾಜನಾಥ್ ಸಿಂಗ್ ಹೇಳಿದರು.