ಡಿಯರ್ ವೆಂಕಿ…
ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. ರಾಜ್ಯ ಹಾಗೂ ಟೀಮ್ ಇಂಡಿಯಾ ಆಟಗಾರನಾಗಿ ನೀವು ಹಲವು ದಾಖಲೆ, ಸಾಧನೆಗಳನ್ನು ಮಾಡಿದ್ದೀರಿ. ಅವೆಲ್ಲವೂ ವಿಶ್ವ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈಗ ಮಹತ್ವದ ಸ್ಥಾನಮಾನ ಸಿಕ್ಕಿದೆ. ಇದು ಖುಷಿಯ ವಿಚಾರವೇ. ಆದ್ರೆ ಮುಂದಿನ ದಿನಗಳಲ್ಲಿ ಕೆಎಸ್‍ಸಿಎನಲ್ಲಿ ಹೊಸ ಶಕೆ ಆರಂಭವಾಗಬೇಕು. ಪಾರದರ್ಶಕ ಆಡಳಿತ, ದಿಟ್ಟ ನಿರ್ಧಾರಗಳಿಂದ ರಾಜ್ಯ ಕ್ರಿಕೆಟ್‍ನ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇದು ನಿಮ್ಮ ಜವಾಬ್ದಾರಿಯೂ ಹೌದು.. ನಿಮ್ಮ ಕರ್ತವ್ಯವೂ ಹೌದು ಎಂಬುದನ್ನು ಮರೆಯಬೇಡಿ.
ಆದ್ರೆ ಯಾವುದೇ ಕಾರಣಕ್ಕೂ 12 ವರ್ಷಗಳ ಹಿಂದೆ ನೀವೂ ಹಾಗೂ ನಿಮ್ಮ ಆಪ್ತರು ಮಾಡಿರುವ ತಪ್ಪನ್ನು ಮತ್ತೆ ಮಾಡಬೇಡಿ. 2010ರಲ್ಲಿ ಉಪಾಧ್ಯಕ್ಷರಾಗಿದ್ದ ನೀವು 12 ವರ್ಷಗಳ ಬಳಿಕ ಕೆಎಸ್‍ಸಿಎ ಚಾವಡಿಗೆ ಬಂದು ಈಗ ಸಾರಥಿಯಾಗಿದ್ದೀರಿ. ಮುಂದಿನ ಮೂರು ವರ್ಷಗಳ ಕಾಲ
ಕರ್ನಾಟಕ ಕ್ರಿಕೆಟ್ ಅನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಹಾಗಂತ ಈ ಹಿಂದಿನಂತೆ ಕೇವಲ ಮೂರು ವರ್ಷಕ್ಕೆ ಸೀಮಿತವಾಗಬೇಡಿ. ದೂರದೃಷ್ಟಿಯನ್ನಿಟ್ಟುಕೊಂಡು ಕೆಎಸ್‍ಸಿಎಗೆ ಆಧುನಿಕತೆ ಸ್ಪರ್ಶವನ್ನು ನೀಡುತ್ತೀರಿ ಎಂಬ ನಂಬಿಕೆ ಇದೆ.
ಹೌದು, ನಿಮಗೆ ಚೆನ್ನಾಗಿ ಗೊತ್ತಿದೆ.. ಕೆಎಸ್‍ಸಿಎ ಗದ್ದುಗೆಯಲ್ಲಿ ಕುಳಿತುಕೊಂಡು ಕೆಲಸ ಸುಲಭದ ಸಂಗತಿಯಲ್ಲ ಅಂತ. ಇಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ನೂರಾರು ಸಮಸ್ಯೆಗಳನ್ನು ಬಗೆಹರಿಸಬೇಕು. ಕೆಎಸ್‍ಸಿಎಗೆ ಅಂಟಿಕೊಂಡಿರುವ ಕಲೆಗಳನ್ನು ಕಿತ್ತು ಹಾಕಬೇಕು. ಕರ್ನಾಟಕ ಕ್ರಿಕೆಟ್‍ನ ಪರಂಪರೆ, ಗೌರವ, ಪ್ರತಿಷ್ಠೆಯನ್ನು ಮತ್ತೆ ಪಡೆಯಬೇಕು. ಇದು ನಿಮ್ಮ ಧ್ಯೇಯವೂ ಹೌದು..ಇದನ್ನು ಕಾರ್ಯರೂಪಕ್ಕೆ ತರೋದು ನಿಮ್ಮ ಕರ್ತವ್ಯವೂ ಹೌದು.
ಮುಖ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರವಾಗಿರುವ ಚಿನ್ನಸ್ವಾಮಿಯಲ್ಲಿ ಮತ್ತೆ ಪಂದ್ಯಗಳನ್ನು ಆಡಿಸಬೇಕು. ಕಳೆದ ವರ್ಷ ಆರ್‍ಸಿಬಿ ವಿಜಯೋತ್ಸದ ವೇಳೆ ಆಗಿದ್ದ ಕಾಲ್ತುಳಿತದಂತಹ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಆದ್ರೆ ದಯವಿಟ್ಟು ಕರ್ನಾಟಕ ಪ್ರೀಮಿಯರ್ ಲೀಗ್ ಅನ್ನು ರದ್ದು ಮಾಡಬೇಡಿ. ಈ ಹಿಂದೆ ನಿಮ್ಮದೇ ಟೀಮ್‍ನವರು ಕೆಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿದ್ದರು. ಆ ಪ್ರಮಾದವನ್ನು ಮತ್ತೆ ಮಾಡಬೇಡಿ. ಅದರ ಬದಲು ಕೆಪಿಎಲ್ ಟೂರ್ನಿಗೆ ಹೊಸ ಸ್ವರೂಪವನ್ನು ನೀಡಿ. ಐಪಿಎಲ್ ಮಾದರಿಯಲ್ಲೇ ಕೆಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ. ಯಾವುದೇ ಕಾರಣಕ್ಕೂ ತಟಸ್ಥ ತಾಣ ಹಾಗೂ ಬೆಂಗಳೂರು, ಹುಬ್ಬಳ್ಳಿ ಮೈಸೂರಿಗೆ ಮಾತ್ರ ಸೀಮಿತಗೊಳಿಸಬೇಡಿ. ಆಯಾ ಫ್ರಾಂಚೈಸಿಗಳ ತವರಿನಲ್ಲೇ ಪಂದ್ಯಗಳನ್ನು ಆಯೋಜಿಸಿ. ಯಾಕಂದ್ರೆ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನು ನೋಡಲು ಸಾವಿರಾರು ಜನ ಸೇರ್ತಾರೆ ಅಂದ ಮೇಲೆ ಕೆಪಿಎಲ್ ಫ್ರಾಂಚೈಸಿಗಳ ತವರಿನಲ್ಲಿ ಪಂದ್ಯಗಳನ್ನು ಸಂಘಟಿಸಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಂದ್ಯವನ್ನು ನೋಡಬಹುದು. ಹೀಗಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಕೆಎಸ್‍ಸಿಎ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಬೇಕಿದೆ. ಅಲ್ಲದೆ ಇದೇ ಮೈದಾನದಲ್ಲಿ ಕೆಎಸ್‍ಸಿಎ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿದ್ರೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ.
ಇನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿಗೆ ಮರುಜೀವ ನೀಡಬೇಕು. ವಿವಿಧ ವಯೋಮಿತಿ, ಕ್ಲಬ್ ಕ್ರಿಕೆಟ್, ರಣಜಿ ಟೂರ್ನಿ ಸೇರಿದಂತೆ ಪ್ರತಿಯೊಂದು ಆಯ್ಕೆಯಲ್ಲೂ ಪಾರದರ್ಶಕತೆಯನ್ನು ತರಬೇಕು. ಹಾಗೇ ಶಿಸ್ತು, ಕಠಿಣ ನಿಯಮಗಳನ್ನು ರೂಪಿಸಬೇಕು. ಯುವ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗಬಾರದು. ಹಾಗೇ ಖಾಸಗಿ ಕ್ಲಬ್‍ಗಳ ಪ್ರಭಾವಕ್ಕೂ ಕಡಿವಾಣ ಹಾಕಬೇಕಿದೆ.
ಹಾಗೇ ಕೆಎಸ್‍ಸಿಎಯನ್ನು ಕ್ಲೀನ್ ಮಾಡೋದು ನಿಮ್ಮ ಮೊದಲ ಕೆಲಸವಾಗಲಿದೆ. ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ಕಾಮಗಾರಿಗಳಿಗೆ ವೇಗವನ್ನು ನೀಡಬೇಕಿದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳ ಸಹಾಯದಿಂದ ಕೆಎಸ್‍ಸಿಎ ಮೈದಾನಗಳನ್ನು ನೀವು ಮನಸು ಮಾಡಿದ್ರೆ ನಿರ್ಮಾಣ ಮಾಡಬಹುದು. ಇನ್ನೊಂದೆಡೆ, ಕೆಎಸ್‍ಸಿಎನಲ್ಲಿ ಈ ಹಿಂದೆ ಆಗಿರುವ ಲೋಪದೋಷಗಳು, ಅವ್ಯವಹಾರಗಳನ್ನು ಬಯಲಿಗೆ ತರಬೇಕು. ಇಲ್ಲಿ, ನಿಮ್ಮ ಸ್ವಾರ್ಥ, ಅಹಂ, ಪ್ರತಿಷ್ಠೆ ಎಲ್ಲವನ್ನೂ ಬಿಡಬೇಕಿದೆ. ರಾಜ್ಯದ ಹಿರಿಯ ಹಾಗೂ ಅನುಭವಿ ಕ್ರಿಕೆಟಿಗರ ಅಭಿಪ್ರಾಯಗಳನ್ನು ಪಡೆದುಕೊಂಡು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕು.
ಮತ್ತೊಂದು ಮನವಿ.. ಕೆಎಸ್‍ಸಿಎನಲ್ಲಿ ಕನ್ನಡ ಪರ್ತಕರ್ತರು, ಕನ್ನಡ ಮಾಧ್ಯಮಗಳಿಗೂ ಆದ್ಯತೆ ನೀಡಿ. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಮಾಧ್ಯಮಗಳನ್ನು ಬಳಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲೂ ತಾರತಮ್ಯ, ಸರ್ವಾಧಿಕಾರಿ ಧೋರಣೆಯನ್ನು ಯಾವತ್ತೂ ಮಾಡಬೇಡಿ.
ಕೊನೆಂiÀiದಾಗಿ ವೆಂಕಿ.. ಗೇಮ್ ಚೇಂಜರ್ಸ್ ಅಂತ ಟೀಮ್ ಕಟ್ಟಿಕೊಂಡು ಕೆಎಸ್‍ಸಿಎ ಪಟ್ಟಕ್ಕೇರಿದ್ದಿರಿ. ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳಿವೆ. ಕರ್ನಾಟಕ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೇರುತ್ತದೆ ಎಂಬ ಭರವಸೆ ಇದೆ. ಸ್ಥಳೀಯ ಪ್ರತಿಭೆಗಳನ್ನು ಬೆಳೆಸಿ.. ಕರ್ನಾಟಕದ ಹೆಸರನ್ನು ಉಳಿಸಿ.. ಆಗ ನೀವು ಕೆಎಸ್‍ಸಿಎ ಅಧ್ಯಕ್ಷನಾಗಿರುವುದಕ್ಕೂ ಸಾರ್ಥಕತೆ ಇರುತ್ತೆ. ಈ ನಂಬಿಕೆಯನ್ನು ಹುಸಿಗೊಳಿಸಬೇಡಿ..!
ಸನತ್ ರೈ








