ಗುಜರಾತ್ ನಲ್ಲೂ ರಾಜಕೀಯ ಹೈಡ್ರಾಮಾ ಶುರುವಾಗಿದ್ದು, ಇಂದು ಬೆಳಿಗ್ಗೆ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಈಗ ರಾಜೀನಾಮೆ ನೀಡಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ. ವಿಶೇಷ ಅಂದ್ರೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ನಾಪತ್ತೆಯಾಗಿದ್ದು, ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣವಾದ ಬೆಳವಣಿಗೆ ನಡೆದಿತ್ತು. ಈ ಬಳಿಕ ಇದೀಗ ಗುಜರಾತ್ ನಲ್ಲೂ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಕಾಂಗ್ರೆಸ್ ನ 4 ಶಾಸಕರು ರಾಜೀನಾಮೆ ನೀಡಿದ್ದು, ಮತ್ತೊಬ್ಬ ಶಾಸಕರು ಯಾರಿಗೂ ಸಿಗದೇ ನಾಪತ್ತೆಯಾಗಿದ್ದಾರೆ.
ಕಾರಣವೇನಿರಬಹುದು..?
ಗುಜರಾತ್ ಬಿಜೆಪಿಯ ಭದ್ರಕೋಟೆ. ಇಲ್ಲಿ ಬಿಜೆಪಿಗೆ ಆಪರೇಷನ್ ಮಾಡುವ ಅವಶ್ಯಕತೆ ಏನಿದೆ ಎಂಬುವುದನ್ನು ನೋಡೋದಾದ್ರೆ ಸಿಗೋ ಉತ್ತರ ರಾಜ್ಯಸಭಾ ಚುನಾವಣೆ. ಹೌದು..! ಮಾರ್ಚ್ 26ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಜೆಪಿಗಿರುವ ಸಂಖ್ಯಾಬಲದಲ್ಲಿ 2 ರಾಜ್ಯಸಭಾ ಸೀಟ್ ಗಳನ್ನು ಗೆಲ್ಲಬಹುದಾಗಿದೆ. ಬಿಜೆಪಿ ಮೂರನೇ ಸ್ಥಾನ ಗೆಲ್ಲಲು ತಂತ್ರರೂಪಿಸುತ್ತಿದ್ದು, ಇದಕ್ಕೆ 111 ಮತಗಳು ಬೇಕಾಗುತ್ತದೆ. ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲ 103 ಮಾತ್ರ. ಹೀಗಾಗಿ ಕೇಸರಿ ಪಡೆ ಬಿಟಿಪಿಯ ಇಬ್ಬರು ಶಾಸಕರನ್ನು, ಎಸ್ ಸಿಪಿಯ ಒಬ್ಬರನ್ನು ತನ್ನತ್ತ ಸೆಳೆದುಕೊಂಡಿದೆ.ಆದ್ರೆ ಬಿಜೆಪಿಗೆ ಇನ್ನೂ ಐವರು ಶಾಸಕರ ಬೆಂಬಲಬೇಕಾಗಿದ್ದು, ಇದಕ್ಕಾಗಿ ಕೇಸರಿ ಪಡೆ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಆಪರೇಷನ್ ಕಮಲಕ್ಕೆ ಹೆದರಿ ಗುಜರಾತ್ ಕಾಂಗ್ರೆಸ್ ತನ್ನ ಶಾಸಕರನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದೆ. ಇನ್ನು ಕಾಂಗ್ರೆಸ್ ಸಹ ಎರಡು ಸ್ಥಾನ ಗೆಲ್ಲುವ ಅವಕಾಶವಿದ್ದು, ಇದಕ್ಕೆ 74 ಮತಗಳು ಬೇಕಾಗುತ್ತದೆ. ಆದ್ರೆ ಕಾಂಗ್ರೆಸ್ ಸಂಖ್ಯಾಬಲ 73 ಇದ್ದು, ಜಿಗ್ನೇಶ್ ಮೇವಾನಿ ಕೈ ಹಿಡಿಯಲಿದ್ದಾರೆ.









