ಬೆಂಗಳೂರು: ಸಿಸಿಬಿ ಅಧಿಕಾರಿಗಳು (Bengaluru CCB Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 21 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಭಾರತೀಯ ಅಂಚೆ ಮೂಲಕ ವಿವಿಧ ದೇಶಗಳಿಂದ ಪೋಸ್ಟ್ ಮೂಲಕ ಬಂದಿದ್ದ ಮಾದಕ ವಸ್ತುಗಳನ್ನು (Narcotics) ವಶಕ್ಕೆ ಪಡೆದಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅಮೆರಿಕ, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೇದರ್ಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಭಾರತೀಯ ಅಂಚೆ ಇಲಾಖೆ ಮೂಲಕ ಸುಮಾರು 3,500 ಅನುಮಾನಾಸ್ಪದ ಅಂಚೆ ಪೋಸ್ಟ್ ಗಳು ಬಂದಿದ್ದವು. ಈ ಕುರಿತು ಸಿಸಿಬಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದರು. 3,500 ಪೋಸ್ಟ್ಗಳ ಪೈಕಿ 606 ಅಂಚೆ ಪೋಸ್ಟ್ ಗಳಲ್ಲಿ ಪಾರ್ಸೆಲ್ ರೂಪದಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆಯಾಗಿವೆ.
ಆರೋಪಿಗಳು ವಿದೇಶದಿಂದ ಬೆಂಗಳೂರಿಗೆ ತರಿಸಿಕೊಂಡು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಧಿಕಾರಿಗಳು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.