ಬೆಂಗಳೂರು: ಸ್ಯಾಂಡಲ್‍ವುಡ್ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಕುರಿತು ತನಿಖೆ ಚುರುಕು ಪಡೆದಿದೆ. ಡ್ರಗ್ಸ್ ದಂಧೆಗೆ ಸಂಪೂರ್ಣ ಮಟ್ಟ ಹಾಕುವವರೆಗೂ ಕಾರ್ಯಚರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಯಿ, ಡ್ರಗ್ಸ್ ದಂಧೆ ಕುರಿತ ತನಿಖೆ ಪ್ರಗತಿಯಲ್ಲಿದೆ. ತನಿಖೆ ವೇಳೆ ಹೊಸ ಆಯಾಮಗಳು ಸಿಗುತ್ತಿವೆ. ಬೆಂಗಳೂರು ನಗರ ಹಾಗೂ ಉಳಿದ ಜಿಲ್ಲೆಗಳಲ್ಲೂ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.
ನಟಿ ರಾಗಿಣಿ ಅವರ ವಿಚಾರಣೆ ತನಿಖೆಯ ಒಂದು ಭಾಗ. ಯಾರು ಯಾರಿಗೆ ನೋಟಿಸ್ ನೀಡಬೇಕೆಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ಜಿಲ್ಲಾ ಕೇಂದ್ರಗಳಲ್ಲಿ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕುವ ವಿಚಾರವಾಗಿ ನಾಳೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದೇನೆ. ಸಭೆಯಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ಪಿಗಳಿಗೆ ಸೂಚನೆ ನೀಡುವುದಾಗಿ ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.