ಬೆಂಗಳೂರು: ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲು ಕಡಿಮೆಯಾಗುತ್ತಿದ್ದು, 2019-20ನೇ ಸಾಲಿನಲ್ಲಿ 17 ಸಾವಿರ ಕೋಟಿ ರೂ. ಕೊರತೆಯಾಗಲಿದೆ. ಇದರ ವಿರುದ್ಧ ರಾಜಕೀಯ ಹೋರಾಟ ಮಾಡಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರವಾಹ ಬಂದಾಗ ಕೇಂದ್ರ ಸರ್ಕಾರದಿಂದ ಒಟ್ಟು 1869 ಕೋಟಿ ರೂ.ಮಂಜೂರಾಗಿತ್ತು. ಆದರೆ ಇದುವರೆಗೆ 1652 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ. ಇಷ್ಟು ಪರಿಹಾರ ಸಾಕಾ?. ಇದರಲ್ಲೇ ನೀವು ಸಂತೋಷವಾಗಿದ್ದೀರಾ ಎಂದ್ರು ಆಡಳಿತ ಪಕ್ಷವನ್ನು ಪ್ರಶ್ನಿಸಿದ್ರು. 25 ಮಂದಿ ಬಿಜೆಪಿ ಸಂಸದರನ್ನು ರಾಜ್ಯದ ಜನ ಗೆಲ್ಲಿಸಿದ್ದಾರೆ. ಒಂದು ದಿನವಾದರೂ ಕೂಡ ಈ ಎಲ್ಲಾ ಬಿಜೆಪಿ 25 ಸಂಸದರು ಒಟ್ಟಾಗಿ ಪ್ರಧಾನಿಯವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯಿಸಿದ್ದೀರಾ ?. ಇದು ರಾಜ್ಯಕ್ಕೆ ಅನ್ಯಾಯವಲ್ಲವೇ? ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.
ಇಡೀ ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದೆ. ಆದರೂ ನಮ್ಮ ಪಾಲು ಕೊಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ನಾನು ವಿರೋಧ ಪಕ್ಷದ ನಾಯಕನಾಗಿ ಹೇಳುತ್ತಿಲ್ಲ. ನಮಗೆ ಕೊಟ್ಟಿರುವ ಪಾಲು ಬಹಳ ಕಡಿಮೆ. ಇದರ ಬಗ್ಗೆ ಬಿಜೆಪಿ ರಾಜಕೀಯ ಹೋರಾಟ ಮಾಡಿಲ್ಲ. ಕೇಂದ್ರದಿಂದ ನಿಮಗೆ ಬರಬೇಕಿರುವ ತೆರಿಗೆ ಪಾಲಿನಲ್ಲಿ 17,600 ಕೋಟಿ ರೂ.ಖೋತಾ ಆಗಿದೆ. ನಮ್ಮ ಜಿಎಸ್ಟಿ ಪಾಲು 39,000 ಕೋಟಿ ರೂ. ನಿರೀಕ್ಷೆ ಇತ್ತು. ಆದರೆ ಬಂದಿರುವುದು 30 ಸಾವಿರ ಕೋಟಿ ರೂ. ಮಾತ್ರ. ಇದರಿಂದ 9 ಸಾವಿರ ಕೋಟಿ ನಷ್ಟವಾಗಿದೆ. ಇದು ರಾಜ್ಯಕ್ಕೆ ಆಗಿರುವ ಅನ್ಯಾಯವಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. ಒಂದು ವರ್ಷದಲ್ಲಿ 11, 215 ಕೋಟಿ ರೂ. ಕಡಿಮೆಯಾದರೆ ಐದು ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಕಡಿಮೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಇದು ಸಣ್ಣ ಮೊತ್ತವೇ . ಪ್ರತಿ ವರ್ಷ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ಪಾಲು ಹೆಚ್ಚಾಗಬೇಕು. ಆದರೆ ಈಗ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಅಲ್ಲದೆ ವಿಚಾರವಾಗಿ ನಾವು ರಾಜಕೀಯವಾಗಿ ಹೋರಾಡಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.








