ಬೆಳಗಾವಿಯ ರಾಮತೀರ್ಥ ನಗರದ ಎಸ್ಸಿ/ಎಸ್ಟಿ ಮೆಟ್ರಿಕ್ ನಂತರದ ಹಾಸ್ಟೇಲಿನಲ್ಲಿ ಯಾವುದೇ ಕಾರಣಕ್ಕೂ ಕೊರೊನಾ ಶಂಕಿತರಿಗೆ ಕ್ವಾರಂಟೈನ್ ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸ್ಥಳಿಯರು ಮನವಿ ಸಲ್ಲಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಮತೀರ್ಥ ನಗರ ನಿವಾಸಿಗಳು ರಾಮತೀರ್ಥ ನಗರದಲ್ಲಿರುವ ಎಸ್ಸಿ/ಎಸ್ಟಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ನಮ್ಮ ಪ್ರದೇಶದಲ್ಲಿ ಸಾಕಷ್ಟು ಆತಂಕ ಮೂಡಿದೆ. ಹೀಗಾಗಿ ಇಲ್ಲಿ ಕ್ವಾರಂಟೈನ್ ಮಾಡಬಾರದು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ವಜ್ರಕಾಂತ ಸಾಲಿಮಠ ರಾಮತೀರ್ಥ ನಗರ ಜನನೀಬಿಡ ಪ್ರದೇಶವಾಗಿದೆ. ಇಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕು ಕಂಡು ಬರದೇ ಇಲ್ಲಿನ ಜನರು ಆರಾಮವಾಗಿದ್ದಾರೆ. ಇಂತಹ ಸಮಯದಲ್ಲಿ ಕ್ವಾರಂಟೈನ್ ಸ್ಥಾಪಿಸುವ ಮೂಲಕ ನಮಗೆಲ್ಲಾ ಕೊರೊನಾ ಭೀತಿ ಮೂಡುವಂತೆ ಮಾಡಬೇಡಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿ.ಎಸ್.ಬಿದ್ನಾಳ್, ಮಹಾಂತೇಶ ಕುಲಕರ್ಣಿ, ಎಮ್.ಟಿ.ಪಾಟೀಲ್, ಸುರೇಶ್ ಯಾದವ್, ತಾಯ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.