ಬೆಂಗಳೂರು : ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಂಡಿದ್ದು, ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು. ಈ ವೇಳೆ ವಿಪಕ್ಷ ಶಾಸಕರು ನಡೆದುಕೊಂಡ ರೀತಿ ಮೆಚ್ಚುಗೆಗೆ ಕಾರಣವಾಗಿದ್ದು, ರಾಜ್ಯಪಾಲರ ಭಾಷಣದ ವೇಳೆ ಶಾಂತಿ ಸಂಯಮ ಕಾಪಾಡಿಕೊಳ್ಳುವ ಮೂಲಕ ವಿಧಾನ ಮಂಡಲದ ಘನತೆಯನ್ನು ಎತ್ತಿ ಹಿಡಿದ್ದಾರೆ.
ಪೌರತ್ವ ತಿದ್ದುಪಡಿ, ಮಂಗಳೂರು ಗೋಲಿಬಾರ್, ಆನಂದ್ ಸಿಂಗ್ ಗೆ ಅರಣ್ಯ ಖಾತೆ ನೀಡಿದ್ದು, ಬೀದರ್ ನ ಶಹಿನ್ ಶಾಲೆ ಪ್ರಕರಣ ಸೇರಿದಂತೆ ಹಲವು ವಿವಾದಗಳು ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಇಂದಿನ ಅಧಿವೇಶನದಲ್ಲಿ ಗಲಾಟೆ ಮಾಡುತ್ತವೆ ಎಂಬ ನಿರೀಕ್ಷೆಗಳಿದ್ದವು.
ನಿನ್ನೆ ಸಂಜೆ ಮತ್ತು ಇಂದು ಬೆಳಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಗಲಾಟೆ ಮಾಡುವ ನಿರ್ಣಯವನ್ನು ಕೈಬಿಡಲಾಗಿದೆ. ಹಾಗಾಗಿ ಮೊದಲ ದಿನದ ಅಧಿವೇಶನ ಅತ್ಯಂತ ಸೌಹಾರ್ದಯುತವಾಗಿ ನಡೆಯಿತು.
ವಿಧಾನಮಂಡಲದ ಜಂಟಿ ಅದಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಸಂಪ್ರದಾಯದಂತೆ ವಿಧಾನ ಪರಿಷತ್ ಕೂಡ ಇಂದು ಸಮಾವೇಶಗೊಂಡಿತ್ತು. 140ನೇ ಅಧಿವೇಶನದ ಮೊದಲನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಇತ್ತೀಚೆಗೆ ನಿಧನರಾದ 19 ಗಣ್ಯರಿಗೆ ಸಂತಾಪ ಸೂಚನೆ ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.