ಸಂಘರ್ಷದ ನಡುವೆ ಹುಟ್ಟಿದ ನಮ್ಮ ಅಜಂತಾ ಸಂಸ್ಥೆಯ ಮೈ ನವಿರೇಳಿಸುವ ಯಶೋಗಾಥೆ
ಅಹಮದಾಬಾದ್, ಜುಲೈ 12: ಹೆಸರು ಓಧವ್‌ಜೀ ರಾಘವ್‌ಜೀ ಪಟೇಲ್. ಗುಜರಾತ್ ನ ಸಿರಾಮಿಕ್ ಪ್ರದೇಶವಾದ ಮೊರ್ಬಿಯ ಪ್ರೌಢ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕ. ಸಂಶೋಧನೆ ಕ್ಷೇತ್ರ ಅಥವಾ ಪೈಲಟ್ ಆಗುವ ಕನಸು ಕಂಡರೂ ತನ್ನ ಹುಟ್ಟಿದ ಊರಿನ ಮಣ್ಣಲ್ಲೇ ಕಷ್ಟನೋ ಸುಖನೋ ಬಾಳಿ ಬದುಕ ಬೇಕು ಅನ್ನುವ ಅಲ್ಲಿಯ ಜನರ ಮನೋಭಿಲಾಷೆ ಮತ್ತು ಸಂಸೃತಿ ಆತನ ಕನಸಿಗೆ ತಣ್ಣೀರೆರಚಿತು. ಆದರೆ ಮುಂದೆ ಸಂಸಾರಸ್ಥನಾದ ಮೇಲೆ ಅನೇಕ ಜವಾಬ್ದಾರಿಗಳು ಹೆಗಲ ಮೇಲೆ ಕೂತಾಗ ಏನು ಮಾಡಬೇಕು ಅನ್ನುವ ಗೊಂದಲದಲ್ಲಿ ಸಿಲುಕಿದ. ಬರುವ 55 ರೂಪಾಯಿಯಲ್ಲಿ ಆರು ಮಕ್ಕಳ ವಿದ್ಯಾಭ್ಯಾಸ, ಆಹಾರ ಬಟ್ಟೆ ಬರೆಗಳನ್ನು ನಿಭಾಯಿಸುವುದೇ ದೊಡ್ಡ ಹರಸಾಹಸವಾಯಿತು.

ಆತನ ಪರಿಸ್ಥಿಯನ್ನು ಕಂಡು ಆತನ ಧರ್ಮ ಪತ್ನಿ ನೀವು ಯಾಕೆ ಬಿಡುವಿನ ವೇಳೆಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಶುರುಮಾಡಬಾರದು. ನಾನು ಏನಾದರೂ ಗಂಡು ಮಗು ಆಗಿರುತ್ತಿದ್ದರೆ, ಸಹೋದರನೊಡಗೂಡಿ ವ್ಯಾಪಾರ ಮಾಡಿ ಸಂಪಾದನೆ ಮಾಡುತ್ತಿದ್ದೆ ಎಂದು ಪರಿಸ್ಥಿತಿಯ ಅವಶ್ಯಕತೆಯನ್ನು ಮನದಟ್ಟು ಮಾಡಿಸಿದಳು.
ಪತ್ನಿ ಮಾತು ಕೇಳಿ ಓಧವ್‌ಜೀ ರಾಘವ್‌ಜೀ ಪಟೇಲ್, ಮೊರ್ಬಿಯಲ್ಲಿ ಬಟ್ಟೆಯ ವ್ಯಾಪಾರ ಪ್ರಾರಂಭಿಸಿದರು. ಆದರೆ ಅದು ಕೈಹಿಡಿಯಲಿಲ್ಲ, ಮುಂದೆ ಸಾಲದ ಮೇಲೆ ರೈತರಿಗೆ ಡೀಸೆಲ್ ಎಂಜಿನ್ ಸರಬರಾಜು ಮಾಡಲು ಪ್ರಾರಂಭಿಸಿದರು. ಈ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶವಿರಲಿಲ್ಲ, ಆದುದರಿಂದ ಆ ವ್ಯಾಪಾರವನ್ನು ಕೈಬಿಟ್ಟರು.

ಮುಂದೆ ತನ್ನ ಶಿಕ್ಷಣ ವೃತ್ತಿಯ ನಡುವೆ ಹೊಸ ಬದಲಾವಣೆ ತರಲು ಪ್ರಯತ್ನಿಸಿದರಾದರೂ ಅವಕಾಶ ಕೂಡಿಬರಲಿಲ್ಲ. 1971 ರಲ್ಲಿ ತನ್ನ 45 ನೇ ವಯಸ್ಸಿನಲ್ಲಿ ಇತರರೊಂದಿಗೆ ಸೇರಿ 1 ಲಕ್ಷ ರೂ ಬಂಡವಾಳ ಸುರಿದು ಸಣ್ಣ ಬಾಡಿಗೆ ಸ್ಥಳದಲ್ಲಿ “ಪ್ರೆಟರ್ಶಿಪ್” ಎಂಬ ಸಂಸ್ಥೆಯನ್ನು ನಿರ್ಮಿಸಿದರು. ಅದಕ್ಕೆ “ಅಜಂತ ಟ್ರಾನ್ಸಿಸ್ಟರ್ ಗಡಿಯಾರ ತಯಾರಿಕೆ” ಎಂದು ಹೆಸರನ್ನಿಟ್ಟರು. ಅದಾಗಲೇ ಉತ್ತರ ಭಾರತದಲ್ಲಿ ‘ಸೈಂಟಿಫಿಕ್’ ಗಡಿಯಾರ ಮನೆ ಮಾತಾಗಿತ್ತು. ಅವರೊಂದಿಗೆ ಪೈಪೋಟಿ ಮಾಡುವುದು ವ್ಯರ್ಥ ಮತ್ತು ಅಸಾಧ್ಯವೆಂದರಿತು ಹೊಸ ಮಾರುಕಟ್ಟೆಯನ್ನು ಹುಡುಕುವುದೇ ಸೂಕ್ತವೆಂದು ದಕ್ಷಿಣ ಭಾರತಕ್ಕೆ ತನ್ನ ಗಡಿಯಾರವನ್ನು ಪರಿಚಯಿಸಿದರು. ಆದರೆ ತನ್ನ ಉತ್ಪನ್ನಗಳನ್ನು ರೈಲ್ವೆ ಮೂಲಕ ಸರಿಯಾದ ಸಮಯಕ್ಕೆ ತಲುಪಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ರಸ್ತೆ ಸಾರಿಗೆಯ ಮೂಲಕ ಮಧ್ಯವರ್ತಿಗಳನ್ನು ಬಳಸದೆ ನೇರವಾಗಿ ಚಿಲ್ಲರೆ ಅಂಗಡಿಯವರಿಗೆ ತಲುಪಿಸಿದರು.

ಹೊಸ ತಂತ್ರಜ್ಞಾನದ ಆವಿಷ್ಕಾರ:
1974 ರಲ್ಲಿ ಸಮಯದಲ್ಲಿ, ಜಗತ್ತು ತಂತ್ರಜ್ಞಾನದ ಗಡಿಯಾರಗಳತ್ತ ವಾಲುತ್ತಿದ್ದಂತೆ ಉತ್ಪನ್ನದ ಮಾರುಕಟ್ಟೆಯೂ ಬದಲಾಗತೊಡಗಿತು. ಕೂಡಲೇ ಹೊಸ ಕ್ವಾರ್ಟ್ಜ್ ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಣ್ಣ ಪಟ್ಟಣದಿಂದ ಶಿಕ್ಷಕ-ಉದ್ಯಮಿ ಓಧವ್‌ಜೀ ರಾಘವ್‌ಜೀ ಪಟೇಲ್ ಮತ್ತು ಅವರ ಮಗ ಪ್ರವೀಣ್ ತೈವಾನ್ ಮತ್ತು ಜಪಾನ್‌ಗೆ ಪ್ರಯಾಣ ಬೆಳೆಸುವುದಕ್ಕೆ ಹಿಂದೆ ಮುಂದೆ ನೋಡಲಿಲ್ಲ. ಅಲ್ಲಿಂದ ಹಿಂದಿರುಗಿದ ಬಳಿಕ ಹೊಸ ತಂಡವನ್ನು ರಚಿಸಿ, ಗೋಡೆ ಗಡಿಯಾರಗಳ ಹೊಸ ಯುಗಕ್ಕೆ ಭಾರತವನ್ನು ಪರಿಚಯಿಸಿದರು. ಕ್ವಾರ್ಟ್ಜ್ ಗಡಿಯಾರಗಳು ಸರಳ, ನಿಖರ, ಸಣ್ಣದಾಗಿದ್ದು,ನಿರ್ವಹಣೆಯ ಅಗತ್ಯವಿಲ್ಲ. ಅಜಂತಾ ಅವರ ಮೊದಲ ಗಡಿಯಾರ “ಜನತಾ ಕ್ಲಾಕ್ ” ಎಂದೇ ಹೆಸರುವಾಸಿಯಾಯಿತು.

1980 ರಲ್ಲಿ, ಸಂಸ್ಥೆಯು ಗ್ರಾಹಕರಿಗೆ ಕೈಗೆಟುಕುವ ಶ್ರೇಣಿಯ ಗಡಿಯಾರಗಳನ್ನು ಪ್ರಾರಂಭಿಸಿತು. ಅವರು ಕಡಿಮೆ ವೆಚ್ಚದಲ್ಲಿ ಗಡಿಯಾರವನ್ನು ತಯಾರಿಸಿ ಅದನ್ನು ಅಧಿಕ ಲಾಭದಲ್ಲಿ ಮಾರಾಟ ಮಾಡಿ ಲಾಭವನ್ನು ಕಂಪನಿಯಲ್ಲಿ ಮತ್ತೆ ಮರು ಹೂಡಿಕೆ ಮಾಡಿದರು. ಅಜಂತಾ, ಒರ್ಪತ್ ಮತ್ತು ಒರೆವಾ ಗೋಡೆ ಗಡಿಯಾರಗಳನ್ನು ಲೋಲಕ, ಮರ, ಸೆರಾಮಿಕ್, ಗಾಜು ಮತ್ತು ಲೋಹದಿಂದ ತಯಾರಿಸಲಾಯಿತು. ಇದು ಇಲ್ಲಿಯವರೆಗೆ ಭಾರತ ಮತ್ತು ಪ್ರಪಂಚದಲ್ಲಿ ಅತಿ ಹೆಚ್ಚು ಖರೀದಿಸಿದ ಮತ್ತು ಜನಪ್ರಿಯ ಬ್ರಾಂಡ್‌ಗಳಾಗಿವೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರಲು ತೈವಾನ್ ಮತ್ತು ಜಪಾನ್‌ನಿಂದ ಯಂತ್ರೋಪಕರಣಗಳನ್ನು ಮತ್ತು ಪ್ರಮುಖ ಬಿಡಿಭಾಗವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದರು. ಇದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅನುಕೂಲವಾಯಿತು.
ಮಹಿಳಾ ಸಬಲೀಕರಣ:
1985 ರಲ್ಲಿ, ಮಹಿಳಾ ಸಬಲೀಕರಣದ ಕುರಿತು ದೇಶಾದ್ಯಾಂತ ಚರ್ಚೆಗಳು ಪ್ರಾರಂಭವಾದವು. ಅದಕ್ಕೆ ಮೊದಲೇ ಗೋಡೆ ಗಡಿಯಾರಗಳ ಪಿತಾಮಹ ಓಧವ್‌ಜೀ ಮಹಿಳಾ ಉದ್ಯೋಗಿಗಳನ್ನು ತನ್ನ ಸಂಸ್ಥೆಯಲ್ಲಿ ನೇಮಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಆಗ ಸಂಪ್ರದಾಯವಾದಿ ಪೋಷಕರಿಗೆ ತಮ್ಮ ಹೆಣ್ಣುಮಕ್ಕಳನ್ನು ಮತ್ತು ಪತ್ನಿಯರನ್ನು ಕೆಲಸಕ್ಕೆ ಕಳುಹಿಸುವಂತೆ ಮನವೊಲಿಸುವ ಕೆಲಸವನ್ನು ಓಧವ್‌ಜೀ ಖುದ್ದಾಗಿ ಕೈಗೆತ್ತಿಕೊಂಡರು.

ಅದಕ್ಕಾಗಿ ಅವರು ತಮ್ಮ ಪರಿವಾರದ ಹೆಣ್ಣು ಮಕ್ಕಳಿಗೆ ಮೊದಲು ಅವಕಾಶ ಕಲ್ಪಿಸಿದರು. ಇದರಿಂದಾಗಿ ಮುಂದೆ ಆ ಪ್ರದೇಶದ ಅನೇಕ ಹೆಣ್ಣು ಮಕ್ಕಳು ಕೆಲಸಕ್ಕೆ ಸೇರಲು ಆಸಕ್ತಿ ತೋರಿಸಿದರು. ಇಂದು ಈ ಕಂಪನಿಯಲ್ಲಿ ಸುಮಾರು 4,500 ಕ್ಕೂ ಹೆಚ್ಚು ಮಹಿಳೆಯರು ತನ್ನ ಬದುಕನ್ನು ಕಟ್ಟಿಕೊಂಡಿದ್ದಾರೆ ಮತ್ತು ವಾರ್ಷಿಕ ಒಂದು ಕೋಟಿಗೂ ಅಧಿಕ ವಾಚು ತಯಾರಾಗುತ್ತಿದೆ. ಮಹಿಳೆಯರು ಕೆಲಸದ ವಿಚಾರದಲ್ಲಿ ಸಮಯವನ್ನು ವ್ಯರ್ಥ ಮಾಡದೇ, ಶಿಸ್ತು, ಸಮರ್ಪಣೆ, ದೃಢ ಸಂಕಲ್ಪಗಳಿಂದ ಭಿನ್ನ ರೀತಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಪರಿಣಾಮಕಾರಿ ಉತ್ಪಾದಕರಾಗಿರುತ್ತಾರೆ, ಅಲ್ಲದೇ ಗಡಿಯಾರ ತಯಾರಿಕೆಗೆ ಅಗತ್ಯವಿರುವ ನಿಖರ ಕೆಲಸಕ್ಕೆ ಮಹಿಳೆಯರ ವೇಗವುಳ್ಳ ಬೆರಳುಗಳು ಸೂಕ್ತವಾಗಿವೆ ಎಂದು ಓಧವ್‌ಜೀ ಅಭಿಪ್ರಾಯವಾಗಿತ್ತು.
ವೈವಿಧ್ಯೀಕರಣ:
1991 ರಲ್ಲಿ, ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅವರು “ಆರ್ಪಟ್ ಇಂಡಸ್ಟ್ರಿಯಲ್ ಎಸ್ಟೇಟ್” ಎಂಬ ಹೊಸ ಕಾರ್ಖಾನೆಯನ್ನು ಹುಟ್ಟುಹಾಕಿದರು. ಇದು ಒಟ್ಟು ಎಂಟು ಕಟ್ಟಡಗಳನ್ನು ಹೊಂದಿತ್ತು ಮತ್ತು ಪ್ರತಿಯೊಂದು ಕಟ್ಟಡವನ್ನು ವಿಭಿನ್ನ ರೀತಿಯ ಉತ್ಪನ್ನಕ್ಕೆ ಮೀಸಲಿಡಲಾಗಿತ್ತು.

1996 ರಲ್ಲಿ, ಅಜಂತಾ ಆರ್ಪತ್ ದೂರವಾಣಿ ಮತ್ತು ಕ್ಯಾಲ್ಕುಲೇಟರ್ ತಯಾರಿಸಲು ಪ್ರಾರಂಭಿಸಿದರು. ಉತ್ಪನ್ನಗಳಿಗೆ ಒಂದು ಗುರುತನ್ನು ನೀಡಲು, ಕಂಪನಿಯು ಅವುಗಳನ್ನು ಹೊಸ ಬ್ರಾಂಡ್ ಆರ್ಪಟ್ ಅಡಿಯಲ್ಲಿ ಪ್ರಾರಂಭಿಸಿತು. ಅಲ್ಲಿಯವರೆಗೆ, ಕಂಪನಿಯನ್ನು ಅಜಂತಾ ಎಂದು ಕರೆಯಲಾಗುತ್ತಿತ್ತು. ಅಲ್ಲಿಂದ ಆರ್ಪತ್ ಮತ್ತು ಅಜಂತಾ ಬ್ರಾಂಡ್‌ಗಳು ಒಟ್ಟಾಗಿ ಅಜಂತಾ ಆರ್ಪತ್ ಸಮೂಹ ಸಂಸ್ಥೆಯಾಗಿ ರಚನೆಯಾಯಿತು. ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳ ತಯಾರಿಕೆಯಲ್ಲಿ ಅಜಂತಾ-ಆರ್ಪತ್‌ನ ಹೆಚ್ಚುತ್ತಿರುವ ಪರಿಣತಿಯ ಹಿನ್ನಲೆಯಲ್ಲಿ ಓಧವ್‌ಜೀ ಮತ್ತು ಪ್ರವೀಣ್ ನಂತರ ತುರ್ತು ದೀಪಗಳು, ಇಸ್ತ್ರಿಪೆಟ್ಟಿಗೆ , ಬ್ಲೆಂಡರ್‌ಗಳು ಮತ್ತು ಫ್ಯಾನ್ ತಯಾರಿಸಲು ಮುಂದಾದರು. ಪ್ಲಾಸ್ಟಿಕ್ ಇಂಜೆಕ್ಷನ್, ಮೋಲ್ಡಿಂಗ್, ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳು ಮತ್ತು ಎಲೆಕ್ಟ್ರಾನಿಕ್ ಫ್ಯಾನ್, ಮಿಕ್ಸರ್ ಗಳು ಮತ್ತು ಬ್ಲೆಂಡರ್‌ಗಳಿಗೆ ವಿದ್ಯುತ್ ಮೋಟರ್‌ಗಳು ಇತ್ಯಾದಿ ಎಲ್ಲವನ್ನೂ ಆರ್ಪತ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ತಯಾರಿಸಲಾಯಿತು. ಇದೀಗ ಫಿಲಿಪ್ಸ್, ಹ್ಯಾವೆಲ್ಸ್, ಉಷಾ, ಬಜಾಜ್, ಕ್ಯಾಸಿಯೊ, ಸಿಟಿಜನ್ ಮತ್ತು ಓರಿಯಂಟ್. ಕಡಿಮೆ ದರ್ಜೆಯ ಮತ್ತು ಅಗ್ಗದ ಚೀನೀ ಉತ್ಪನ್ನಗಳು ಈ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ಸ್ಪರ್ಧೆಯನ್ನು ನೀಡಿದೆ. ಅಗ್ಗದ ಚೀನೀ ಉತ್ಪನ್ನಗಳ ಒಳಹರಿವು, ತೆರಿಗೆ ಸಮಸ್ಯೆಗಳು, ಇತರ ಬ್ರಾಂಡ್‌ಗಳ ಸ್ಪರ್ಧೆ ಮತ್ತು ಕೈಗಡಿಯಾರಗಳ ಜನಪ್ರಿಯತೆಯಿಂದ ಇತ್ತೀಚಿನ ದಿನಗಳಲ್ಲಿ ಮೊರ್ಬಿ ಮೂಲದ ವಾಲ್ ಗಡಿಯಾರ ತಯಾರಕರಿಗೆ ಬೇಡಿಕೆ ಕಡಿಮೆಯಾಗಿದೆ. ಶೀಘ್ರದಲ್ಲೇ ಒರೆವಾ ಸೂಪರ್ ಅಜಂತಾ ಗ್ರೂಪ್ ನಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಕೂಡ ಮಾರುಕಟ್ಟೆ ಪ್ರವೇಶ ಮಾಡಲಿದೆ.

ಇಂದು ಸಾವಿರಾರು ಕೋಟಿ ವ್ಯವಹಾರ ನಡೆಸುವ ಅಜಂತಾ, ಒರ್ಪಾಟ್ 45 ದೇಶಗಳಲ್ಲಿ ಮನೆ ಮಾತಾಗಿದೆ. ಅಷ್ಟೇ ಅಲ್ಲ ಅಜಂತಾ, ಆರ್ಪತ್ 85 ರೂಪಾಯಿ ಬೆಲೆ ಬಾಳುವ ವಾಚ್ ನಿಂದ ಹಿಡಿದು ಸುಮಾರು 18 ,000 ರೂಪಾಯಿ ಬೆಲೆ ಬಾಳುವ ವಾಚ್ ಗಳವರೆಗೆ ಸುಮಾರು ಐವತ್ತು ಸಾವಿರಕ್ಕಿಂತಲೂ ಹೆಚ್ಚು ವ್ಯಾಪಾರಸ್ಥರು ವ್ಯವಹಾರ ನಡೆಸುತ್ತಿದ್ದಾರೆ. ಇದರ ಜೊತೆಯಾಗಿ ಚಾರಿಟೇಬಲ್ ಇನ್ಸ್ಟಿಟ್ಯೂಟ್ ನಡೆಸಿಕೊಂಡು ಸಾವಿರಾರು ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆ ಶಾಲೆಯ ಮತ್ತು ನೀರಿನ ಅಗತ್ಯತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಓಧವ್‌ಜೀ ರಾಘವ್‌ಜೀ ಪಟೇಲ್ ತನ್ನ ಉತ್ಪನ್ನವನ್ನು ಆಧುನಿಕತೆಗೆ ತಂದರೂ ತಾನು ಮಾತ್ರ ನಿವೃತ್ತ ಶಿಕ್ಷಕನಾಗಿ ಬರುವ ಸುಮಾರು 1200ರೂ ಪೆನ್ಷನ್ ದುಡ್ಡಿನಲ್ಲಿ ಕೊನೆಯ ದಿನಗಳವರೆಗೂ ಸರಳವಾಗಿ ಜೀವನವನ್ನು ಸಾಗಿಸಿದರು.

ಆತ್ಮನಿರ್ಭರ ಭಾರತ ಪರಿಕಲ್ಪನೆ ಗರಿಗೆದರುತ್ತಿರುವ ಸಂದರ್ಭದಲ್ಲಿ ಓಧವ್‌ಜೀ ಪಟೇಲರ ಗಡಿಯಾರ ತಯಾರಿಕಾ ಸಂಸ್ಥೆ ಅಜಂತಾ ಸಂಸ್ಥೆಯ ಸಮರ್ಥ ಕಾರ್ಯಕ್ಷಮತೆ ಭಾರತೀಯ ವ್ಯಾಪಾರಿ ಚಳುವಳಿಗೊಂದು ಪ್ರೇರಣೆಯಾಗುತ್ತದಾ!








