ಬೆಳಗಾವಿ : ಕೆಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಬಳಗ ಕಟ್ಟುವುದೇ ನಮ್ಮ ಮುಖ್ಯ ಅಜೆಂಡಾ ಎಂದು ಕೆಪಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಬಳಗ ಕಟ್ಟಬೇಕಾಗಿದೆ. ಕೆಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಬಳಗ ಕಟ್ಟಬೇಕಾಗಿದೆ. ನಮ್ಮ ಪಕ್ಷದ ಸಿದ್ಧಾಂತಗಳನ್ನು ಮತ್ತು ದೇಶದ ಇಂದಿನ ಪರಿಸ್ಥಿತಿಗಳ ಬಗ್ಗೆ ಜನರಿಗೆ ತಿಳಿಸುವಂತಹ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಪರಿವರ್ತನೆ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ನಾವು ಬಿಜೆಪಿಯನ್ನು ಕಾಪಿ ಮಾಡುತ್ತಿಲ್ಲ. ಪಕ್ಷಕ್ಕೆ ಸದ್ಯಕ್ಕೆ ಅವಶ್ಯಕತೆ ಇರುವುದನ್ನು ಮಾಡುತ್ತಿದ್ದೇವೆ. ಕೇಡರ್ ಬೇಸ್ ಪಕ್ಷ ಬಿಜೆಪಿ ಒಂದೇ ಅಲ್ಲ.ಬಿಜೆಪಿಗಿಂತ ಮೊದಲೇ ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಕೇಡರ್ ಬೇಸ್ ಪಕ್ಷಗಳಾಗಿವೆ ಎಂದು ಹೇಳಿದರು.
ಇನ್ನು ಉತ್ತರ ಕರ್ನಾಟಕ ಸೇರಿ ಇಡೀ ರಾಜ್ಯದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಬಲವರ್ಧನೆಗೆ ಪ್ರಾಮುಖ್ಯತೆ ನೀಡುತ್ತೇವೆ ಎಂದ ಸತೀಶ್ ಜಾರಕಿಹೊಳಿ, ಪತ್ರಕರ್ತರ ಕೇಳಿದ ಪಕ್ಷದಲ್ಲಿ ಗುಂಪುಗಾರಿಕೆ ಇದ್ಯಾ ಎಂಬುದಕ್ಕೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇರುವುದು ಸಹಜ. ಆದರೆ ಪಕ್ಷದ ವಿಷಯ ಬಂದಾಗ ಎಲ್ಲರೂ ಒಂದೇ ಎಂದರು.








