ಬೆಂಗಳೂರು: ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರ ವಿರುದ್ಧ ಬಿಜೆಪಿ ಮಾಡುತ್ತಿರುವ ಗಂಭೀರ ಆರೋಪಗಳಿಗೆ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಪೊಲೀಸರು ಯಾವತ್ತೂ ಬಟ್ಟೆ ಬಿಚ್ಚುವ ಸಂಪ್ರದಾಯ ಇಟ್ಟುಕೊಂಡಿಲ್ಲ, ಸ್ವತಃ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡು ರಂಪಾಟ ಮಾಡಿದ್ದಾಳೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ನಡೆದ ಗಲಾಟೆ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಪೊಲೀಸರ ಮೇಲೆ ವಿನಾಕಾರಣ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಘಟನೆಯ ಅಸಲಿಯತ್ತೇನು?
ಸಚಿವ ಸಂತೋಷ್ ಲಾಡ್ ಅವರು ಘಟನೆಯ ಬಗ್ಗೆ ವಿವರಿಸುತ್ತಾ, ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ಗಲಾಟೆ ನಡೆದಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ವಶಕ್ಕೆ ಪಡೆಯಲು ಮುಂದಾದಾಗ, ಆ ಮಹಿಳೆ ಪೊಲೀಸರಿಗೆ ಸಹಕರಿಸುವ ಬದಲು ದರ್ಪ ತೋರಿದ್ದಾರೆ. ಕೇವಲ ಬಾಯಿ ಮಾತಿನ ಚಕಮಕಿ ನಡೆಸದೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರ ಮೇಲೆ ಗೂಬೆ ಕೂಡಿಸಲು ತಾವೇ ವಿವಸ್ತ್ರಗೊಂಡು, ಬಟ್ಟೆ ಹರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾರೆ ಎಂದು ಸಚಿವರು ಆರೋಪಿಸಿದರು.
ಪೊಲೀಸರಿಗೆ ಕಚ್ಚಿ ಹಲ್ಲೆ
ಘಟನೆಯ ತೀವ್ರತೆಯನ್ನು ವಿವರಿಸಿದ ಸಚಿವರು, ಸದರಿ ಮಹಿಳೆ ಪೊಲೀಸ್ ಸಿಬ್ಬಂದಿಗೆ ಕಚ್ಚಿದ್ದಾಳೆ ಮತ್ತು ಸುಮಾರು 10 ಜನ ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾಳೆ. ಇಂತಹ ಪ್ರಸಂಗಗಳು ನಡೆದಾಗ ಪೊಲೀಸರು ಸಂಯಮ ಕಳೆದುಕೊಳ್ಳುವುದು ಸಹಜ, ಆದರೆ ನಮ್ಮ ಪೊಲೀಸರು ಅಂತಹ ನೀಚ ಕೆಲಸಕ್ಕೆ ಕೈಹಾಕಿಲ್ಲ. ಕರ್ನಾಟಕದಲ್ಲಿ ನಮ್ಮ ಪೊಲೀಸರು ಆರೋಪಿಗಳ ಬಟ್ಟೆ ಬಿಚ್ಚುವ ಅಮಾನವೀಯ ಸಂಪ್ರದಾಯವನ್ನು ಯಾವತ್ತೂ ಪಾಲಿಸಿಕೊಂಡು ಬಂದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಅವರ ಆದ್ಯತೆಯಾಗಿದೆ ಎಂದು ಸಮರ್ಥಿಸಿಕೊಂಡರು.
ವೀಡಿಯೋ ಮತ್ತು ಸತ್ಯಾಸತ್ಯತೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಮೇಲ್ನೋಟಕ್ಕೆ ವೀಡಿಯೋ ನೋಡಿದಾಗ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ ಎಂದೆನಿಸುವುದು ಸಹಜ. ಆದರೆ ಅದರ ಹಿಂದಿನ ಸತ್ಯ ಬೇರೆಯೇ ಇದೆ. ವಿಷಯದ ಸತ್ಯಾಸತ್ಯತೆಯನ್ನು ಮರೆಮಾಚಿ, ಕೇವಲ ಭಾವನಾತ್ಮಕವಾಗಿ ವಿಷಯವನ್ನು ಬಿಂಬಿಸಿ ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ. ಮಹಿಳಾ ಸಿಬ್ಬಂದಿಯ ಮೇಲೆ ಆಕೆ ಹಲ್ಲೆ ನಡೆಸಿರುವ ಸಾಕ್ಷಿಗಳು ಲಭ್ಯವಿವೆ ಎಂದು ತಿಳಿಸಿದರು.
ಈಗಾಗಲೇ ಈ ಘಟನೆಯ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದೇನೆ. ಆ ಮಹಿಳೆಯ ಮೇಲೆ ಸ್ಥಳೀಯವಾಗಿ ಹಲ್ಲೆಯಾಗಿರುವುದು ನಿಜ. ಆ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಾನೇ ಉಸ್ತುವಾರಿ ಸಚಿವನಾಗಿ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಜರುಗಲಿದೆ ಎಂದು ಭರವಸೆ ನೀಡಿದರು.
ಬಳ್ಳಾರಿ ಘಟನೆಗೆ ಸಮರ್ಥನೆ ಇಲ್ಲ
ಇದೇ ವೇಳೆ ಬಳ್ಳಾರಿಯಲ್ಲಿ ನಡೆದ ಮತ್ತೊಂದು ಗಲಾಟೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಬಳ್ಳಾರಿ ಘಟನೆಗೆ ನನ್ನ ಯಾವುದೇ ಬೆಂಬಲವಿಲ್ಲ ಹಾಗೂ ಅದನ್ನು ನಾನು ಸಮರ್ಥಿಸಿಕೊಳ್ಳುವುದೂ ಇಲ್ಲ. ಆ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.








