ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ತಲುಪಿರುವುದು ದೇಶದ ಆರ್ಥಿಕ ಸ್ಥಿತಿ ಎಷ್ಟು ದುರ್ಬಲಗೊಂಡಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತಪ್ಪು ನೀತಿಗಳ ಪರಿಣಾಮವಾಗಿ ರೂಪಾಯಿ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಸರ್ಕಾರದ ನಿರ್ಧಾರಗಳು ಹಾಗೂ ದುರ್ಬಲ ಆರ್ಥಿಕ ನಿರ್ವಹಣೆ ನಮಗೆ ನೇರವಾಗಿ ಹೊಡೆತ ನೀಡುತ್ತಿದೆ. ಕರೆನ್ಸಿ ಮೌಲ್ಯ ಕಾಯ್ದುಕೊಳ್ಳಬೇಕಾದ ಸ್ಥಾನದಲ್ಲಿ, ಸರ್ಕಾರದ ನೀತಿಗಳು ಅದನ್ನು ಇನ್ನಷ್ಟು ದುರ್ಬಲಗೊಳಿಸಿವೆ ಎಂದು ಖರ್ಗೆ ಆರೋಪಿಸಿದ್ದಾರೆ.
ನಾವು ದೇಶದೊಳಗೆ ಏನು ಬೇಕಾದರೂ ಹೇಳಬಹುದು, ನಮ್ಮನ್ನು ನಾವು ಹೊಗಳಿಕೊಳ್ಳಬಹುದು. ಆದರೆ ಜಗತ್ತಿನ ಮುಂದೆ ನಮ್ಮ ರೂಪಾಯಿಗೆ ಇಂದಿನ ಸ್ಥಿತಿಯಲ್ಲಿ ಬೆಲೆ ಇಲ್ಲದಂತಾಗಿದೆ. ದೇಶದ ಆರ್ಥಿಕ ಸ್ಥಿತಿ ಸರಿಯಾಗಿ ನಿಭಾಯಿಸಲಾಗುತ್ತಿಲ್ಲ. ನೀತಿಗಳಲ್ಲಿ ದೋಷವಿಲ್ಲದಿದ್ದರೆ ಇಂದು ರೂಪಾಯಿ ಹೀಗೆ ಕುಸಿಯುತ್ತಿರಲಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.
ರೂಪಾಯಿ ಮೌಲ್ಯ ಕುಸಿತದ ಪರಿಣಾಮವಾಗಿ ಇಂಪೋರ್ಟ್ ಸರಕುಗಳ ಬೆಲೆ ಏರಿಕೆ, ಇಂಧನ ದರಗಳ ಹೆಚ್ಚಳ, ಸಾಮಾನ್ಯ ಜನರ ಜೀವನದಲ್ಲಿ ಹೆಚ್ಚುವರಿ ಒತ್ತಡ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂಬ ಆತಂಕವೂ ವ್ಯಕ್ತವಾಗಿದೆ.








