ರಷ್ಯಾ ದ ಸ್ಪುಟ್ನಿಕ್ ವಿ ಲಸಿಕೆಯ ಮೇಲೆ ಅತೀವ ನಂಬಿಕೆ – ಫಿಲಿಪ್ಪೈನ್ಸ್ ಅಧ್ಯಕ್ಷ
ಮನಿಲಾ, ಅಗಸ್ಟ್ 13: ರಷ್ಯಾ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಗಳಲ್ಲಿ ವೈಯಕ್ತಿಕವಾಗಿ ಭಾಗಿಯಾಗುವುದಾಗಿ ಫಿಲಿಪ್ಪೈನ್ಸ್ ಅಧ್ಯಕ್ಷ ರಾಡ್ರಿಗೋ ಡ್ಯುಟರ್ಟಿ ಹೇಳಿದ್ದಾರೆ.
ತಾನು ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಸಂಶೋಧನೆಯಲ್ಲಿ ಅತೀವ ನಂಬಿಕೆ ಹೊಂದಿರುವುದಾಗಿ ಅವರು ತಿಳಿಸಿದ್ದು, ನೀವು ತಯಾರಿಸಿರುವ ಲಸಿಕೆ ಮಾನವಕುಲಕ್ಕೆ ಭಾರಿ ಪ್ರಯೋಜನಕಾರಿಯಾಗಲಿದೆ ಎಂದು ಸಂದರ್ಶನವೊಂದರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದ್ದಾರೆ.

ರಷ್ಯಾ ಅಭಿವೃದ್ಧಿ ಪಡಿಸಿರುವ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಿಗೆ ತಾನು ವೈಯಕ್ತಿಕವಾಗಿ ಸಿದ್ಧನಾಗಿರುವುದಾಗಿ ಘೋಷಿಸಿರುವ ಫಿಲಿಪ್ಪೈನ್ಸ್ ಅಧ್ಯಕ್ಷ ರಾಡ್ರಿಗೋ ಡ್ಯುಟರ್ಟಿ ಲಸಿಕೆಯ ಉತ್ಪಾದನೆಗೂ ರಷ್ಯಾಕ್ಕೆ ನೆರವಾಗುವುದಾಗಿ ತಿಳಿಸಿದ್ದಾರೆ.
ರಷ್ಯಾವು ಫಿಲಿಪ್ಪೈನ್ಸ್ಗೆ ಲಸಿಕೆಯನ್ನು ನೀಡುವುದಾಗಿ ತಿಳಿಸಿರುವ ಕ್ರಮವನ್ನು ಸ್ವಾಗತಿಸಿರುವ ಫಿಲಿಪ್ಪೈನ್ಸ್ ಅಧ್ಯಕ್ಷ ನಾನೇ ಮೊದಲಿಗನಾಗಿ ಲಸಿಕೆಯನ್ನು ಸಾರ್ವಜನಿಕರೆದುರು ಬಹಿರಂಗವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ಲಸಿಕೆ ಪೂರೈಕೆ ಮತ್ತು ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದಂತೆ ಪುಟಿನ್ ಜೊತೆ ರಾಡ್ರಿಗೋ ಮಾತುಕತೆ ನಡೆಸಲಿದ್ದಾರೆ.








