ಭಾರತೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಚಯಿಸಿದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗೆ ದೇಶದಾದ್ಯಂತ ಬಳಕೆದಾರರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಮೊದಲ ದಿನವೇ ಸಂಜೆ 7 ಗಂಟೆಯೊಳಗೆ ಸುಮಾರು 1.4 ಲಕ್ಷ ಬಳಕೆದಾರರು ವಾರ್ಷಿಕ ಪಾಸ್ ಖರೀದಿಸಿದ್ದು, ಟೋಲ್ ಪ್ಲಾಜಾಗಳಲ್ಲಿ ಒಟ್ಟು 1.39 ಲಕ್ಷಕ್ಕೂ ಹೆಚ್ಚು ವಹಿವಾಟುಗಳು ದಾಖಲಾಗಿವೆ.
ವಾರ್ಷಿಕ ಪಾಸ್ ಮೂಲಕ ವಾಹನ ಚಾಲಕರಿಗೆ ನಿರಂತರ ಪ್ರಯಾಣದ ಅನುಭವವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಜೊತೆಗೆ, ಪ್ರತಿ ಟೋಲ್ ಪ್ಲಾಜಾದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ತಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಯೋಜನೆಗೆ ಮೊದಲ ದಿನವೇ ದೊರೆತಿರುವ ಅದ್ಭುತ ಪ್ರತಿಕ್ರಿಯೆ ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಪ್ರೋತ್ಸಾಹ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನ ಮಾಲೀಕರು ಈ ಪಾಸ್ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.








