ಸಂಗೀತಕ್ಕೆ ಎಂತಹ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂಬ ಮಾತು ಇದೆ. ಆದರೆ ಈ ಕೊರೋನಾ ಎಂಬ ಮಹಾಮಾರಿ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂರವರ ಸ್ವರವನ್ನೇ ಕಸಿದುಕೊಂಡಿದೆ.
1946ರ ಜೂನ್ 4ರಂದು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು.
ಅವರ ತಂದೆ ದಿ. ಎಸ್.ಪಿ. ಸಾಂಬಮೂರ್ತಿ, ಹರಿಕಥೆ ಕಲಾವಿದರು. ತಾಯಿ ಶಕುಂತಲಮ್ಮ. ಎಸ್.ಪಿ.ಬಿ ಅವರಿಗೆ ಇಬ್ಬರು ಅಣ್ಣಂದಿರು ಮತ್ತು ಐದು ಮಂದಿ ಸಹೋದರಿಯರು.
ಗಾಯಕಿಯಾಗಿದ್ದ ಎಸ್.ಪಿ. ಶೈಲಜಾ ಎಸ್ ಪಿಬಿ ಅವರ ತಂಗಿ. ಎಸ್ ಪಿಬಿ ಅವರ ಪತ್ನಿ ಸಾವಿತ್ರಿ. ಎಸ್.ಪಿ.ಬಿ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗಳು ಪಲ್ಲವಿ ಮತ್ತು ಮಗ ಎಸ್ ಪಿ ಬಿ ಚರಣ್. ಎಸ್.ಪಿ.ಬಿ ಚರಣ್ ಕೂಡ ಹಿನ್ನೆಲೆ ಗಾಯಕರಾಗಿದ್ದಾರೆ.
ಎಸ್.ಪಿ.ಬಿ ಅವರಿಗೆ ಧಾರ್ಮಿಕ ವಿಚಾರಗಳ ಬಗ್ಗೆ, ಸಂಸ್ಕೃತ ಭಾಷೆ ಮೇಲೆ ಸಾಕಷ್ಟು ಪ್ರೀತಿ. ಭಕ್ತಿ ಗೀತೆಗಳ ಮೂಲಕ ಜನ ಸಾಮಾನ್ಯರಿಗೆ ಅಚ್ಚುಮೆಚ್ಚಿನ ಗಾಯಕನಾಗಿದ್ದರು.
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಅವರು ಗಿನ್ನಿಸ್ ದಾಖಲೆ ಬರೆದಿದ್ದರು.
ದಕ್ಷಿಣ ಭಾರತದ ಮನೆ ಮನೆಯಲ್ಲೂ ಮೋಡಿ ಮಾಡಿರುವ ಹಾಡುಗಾರ ಎಸ್ ಪಿಬಿ ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜರವರೆಗೆ ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುತ್ತಿದ್ದರು.
ಅತ್ಯುತ್ತಮ ಗಾಯಕನಾಗಿ ಒಟ್ಟು 6 ಬಾರಿ ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಇವರಿಗೆ ಸಂದಿದೆ. ಹಲವಾರು ಡಾಕ್ಟರೇಟ್ ಪದವಿ ಗಳು ಒಲಿದಿವೆ.
ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು ಇಪ್ಪತ್ಮೂರು ರಾಜ್ಯ ಪ್ರಶಸ್ತಿಗಳು ಬಂದಿವೆ. ಅಷ್ಟೇ ಅಲ್ಲ ಬಾಲಿವುಡ್ ಹಾಡುಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಸಂಗೀತ ದಂತಕಥೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ನೀಡಿ ಗೌರವಿಸಲಾಗಿದೆ.
ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ನಟ ಮತ್ತು ಚಲನಚಿತ್ರ ನಿರ್ಮಾಪಕರು ಕೂಡ ಆಗಿದ್ದರು.