ಬೆಂಗಳೂರು : ಪಾದರಾಯನಪುರ ಗಲಭೆ ಕುರಿತಂತೆ ಸಚಿವ ಈಶ್ವರಪ್ಪ ದೇಶದ್ರೋಹಿ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗಲಾಟೆ ವಿಚಾರವಾಗಿ ನಾನು ಜಮೀರ್ ಅಹಮದ್ ಬಳಿ ಮಾತನಾಡಿದ್ದೇನೆ. ಆತ ವೈದ್ಯಕೀಯ ಸಿಬ್ಬಂದಿಗಳು ತನ್ನನ್ನು ಕೇಳಿಯೇ ಪಾದರಾಯನಪುರಕ್ಕೆ ಹೋಗಬೇಕಿತ್ತು ಎಂದು ಹೇಳಿಲ್ಲ. ಬದಲಾಗಿ ರಾತ್ರಿ ವೇಳೆ ಹೋಗುವುದು ಬೇಡ ಎಂದಷ್ಟೇ ಹೇಳಿದ್ದರು. ಇದನ್ನೂ ಬಿಜೆಪಿ ನಾಯಕರು ತಪ್ಪಾಗಿ ಅರ್ಥೈಸಿದ್ದಾರೆ. ಇನ್ನೂ ಸಚಿವ ಈಶ್ವರಪ್ಪ ಈ ಕುರಿತು ಅತ್ಯಂತ ಬೇಜವಾಬ್ದಾರಿ ಮತ್ತು ದೇಶದ್ರೋಹಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇನ್ನು ಚಿಕಿತ್ಸೆ ತಪಾಸಣೆಗೆ ಒಳಪಡಿಸಿ ಅಂತ ಹೇಳಿದ್ರೆ ಯಾರೇ ಆದ್ರೂ ಸಹಕಾರ ನೀಡಬೇಕು. ಸಹಕಾರ ಕೊಡದಿದ್ರೆ ಅದು ಯಾರೇ ಮಾಡಿದ್ದರೂ ತಪ್ಪು. ಪ್ರಾಣದ ಭಯ ಬಿಟ್ಟು ವೈದ್ಯರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಪೋರ್ಟ್ ಮಾಡಬೇಕು. ಸಪೋರ್ಟ್ ಮಾಡದವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದರು.
ಇದೇ ವೇಳೆ ಜಮೀರ್ ಅವರನ್ನು ಕ್ವಾರಂಟೈನ್ ಮಾಡಬೇಕು ಎನ್ನುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಗತ್ಯವಿದ್ದರೆ ಶಾಸಕ ಜಮೀರ್ ಅಹಮದ್ ಅವರನ್ನು ಕ್ವಾರಂಟೈನ್ ಮಾಡಲಿ. ಆದರೆ, ಕ್ವಾರಂಟೈನ್ ಮಾಡಲೇಬೇಕು ಎಂದು ಮಾಡುವುದಲ್ಲ ಎಂದರು.








