ಪದ್ಮಶ್ರೀ ಪುರಸ್ಕೃತ ಪರಿಸರ ಪ್ರೇಮಿ ತುಳಸಿ ಗೌಡ ಅವರು ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳ್ಳಿ ಗ್ರಾಮಕ್ಕೆ ಸೇರಿದ ತುಳಸಿ ಗೌಡ ಅವರು ವಯೋ ಸಹಜ ಅನಾರೋಗ್ಯದಿಂದ 86ನೇ ವರ್ಷದಲ್ಲಿ ನಿಧನರಾಗಿದ್ದಾರೆ. ವೃಕ್ಷಮಾತೆ ಎಂದೇ ಹೆಸರುವಾಸಿಯಾಗಿದ್ದ ಅವರು, ತಮ್ಮ ಜೀವನವನ್ನು ಸಂಪೂರ್ಣವಾಗಿ ಪ್ರಕೃತಿ ಸಂರಕ್ಷಣೆಗೆ ಮೀಸಲಿಟ್ಟು, ಅನೇಕ ಪೀಳಿಗೆಗಳಿಗೆ ಮಾದರಿಯಾಗಿದ್ದರು.
ಬಡ ಕುಟುಂಬದಲ್ಲಿ ಜನಿಸಿದ ತುಳಸಿ ಗೌಡ ಅವರು ಯಾವುದೇ ಶಿಕ್ಷಣವನ್ನು ಪಡೆಯದೆ ಪ್ರಕೃತಿಯ ಜೊತೆ ಒಡನಾಟ ಬೆಳೆಸಿಕೊಂಡಿದ್ದರು. ಮಣ್ಣಿನ ಜೊತೆಗಿನ ನಂಟು, ಹಸಿರು ಸಸಿಗಳಲ್ಲಿ ಇರುವ ಜೀವಶಕ್ತಿಯ ಅರಿವು, ಮತ್ತು ಪರಿಸರದ ಕುರಿತ ಕಾಳಜಿಯು ಅವರ ವ್ಯಕ್ತಿತ್ವದ ಅತ್ಯಂತ ಪ್ರಮುಖ ಅಂಶವಾಗಿತ್ತು. 30,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳನ್ನು ಬೆಳೆಸುವಲ್ಲಿ ತೋರಿದ ತಾಳ್ಮೆ ಮತ್ತು ನಿರಂತರ ಶ್ರದ್ಧೆ ಇಡೀ ದೇಶದ ಜನರಿಗೆ ಪ್ರೇರಣೆಯಾಗುವಂತೆ ಮಾಡಿತು..
ಅವರಿಗೆ 2021ರಲ್ಲಿ ಭಾರತ ಸರ್ಕಾರದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಲಾಯಿತು. ತುಳಸಿ ಗೌಡರನ್ನು ಪರಿಸರವಾದಿಗಳು ಎನ್‌ಸೈಕ್ಲೋಪೀಡಿಯಾ ಫಾರೆಸ್ಟ್, ವೃಕ್ಷ ಮಾತೆ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಕಾಡು ಮತ್ತು ಕಾಡಿನಲ್ಲಿನ ಸಸ್ಯಗಳ ಬಗ್ಗೆ ಇವರಿಗಿದ್ದ ಜ್ಞಾನಕ್ಕಾಗಿ ಇವರನ್ನು ಹೀಗೆ ಕರೆಯಲಾಗುತ್ತಿತ್ತು.
ತುಳಸಿ ಗೌಡ ಅವರ ಕೆಲಸವು ನಮ್ಮ ಪರಿಸರದ ಬೆಲೆ ಮತ್ತು ಅದರ ಜಾಗೃತಿಯು ಎಷ್ಟು ಮುಖ್ಯವೆಂದು ನಮಗೆ ತಿಳಿಸುತ್ತದೆ. ಅವರು ಅಗಲಿದರೂ, ಅವರು ನೆಟ್ಟು ಬೆಳೆಸಿದ ಹಸಿರು ಸಸಿಗಳು, ತಮ್ಮ ಮಾತುಗಳಿಲ್ಲದ ಅಭಿವ್ಯಕ್ತಿಯ ಮೂಲಕ ಅವರನ್ನು ಸದಾ ಸ್ಮರಿಸುತಿರುತ್ತದೆ.








