ಪದ್ಮವಿಭೂಷಣ, ಮಾಜಿ ಅಟಾರ್ನಿ ಜನರಲ್ ಸೊರಾಬ್ಜಿ ಕೊರೊನಾಗೆ ಬಲಿ
ನವದೆಹಲಿ : ಪದ್ಮವಿಭೂಷಣ, ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ ಸೋಲಿ ಜೆಹಾಂಗಿರ್ ಸೊರಬ್ಜಿ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಸೊರಬ್ಜಿ ಅವರು 1930ರಲ್ಲಿ ಮುಂಬೈನಲ್ಲಿ ಜನಿಸಿದ್ದು, 1953ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ನಂತರ 1971ರಲ್ಲಿ ಸುಪ್ರೀಂ ಕೋರ್ಟ್ ನ ಹಿರಿಯ ಕೌನ್ಸಿಲ್ ಆಗಿ ಪದೋನ್ನತಿ ಪಡೆದಿದ್ದರು. 1989-90ರಲ್ಲಿ ಮೊದಲ ಬಾರಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು. 1998-2000ರ ವರೆಗೆ ಅವರು ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
2002ರ ಮಾರ್ಚ್ ತಿಂಗಳಲ್ಲಿ ಸೊರಬ್ಜಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.










