ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯಾನಕ ಉಗ್ರದಾಳಿಯಲ್ಲಿ 26 ಪ್ರವಾಸಿಗರು ದುರ್ಮರಣ ಹೊಂದಿದ ಘಟನೆಯಿಂದ ಇಡೀ ದೇಶವು ಕಂಗಾಲಾಗಿತ್ತು. ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ತ್ವರಿತ ಕಾರ್ಯಾಚರಣೆ ಆರಂಭಿಸಿ, ಆಪರೇಷನ್ ಸಿಂದೂರ್ ಮೂಲಕ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿತ್ತು.
ಈಗ ಈ ದಾಳಿಯ ಹಿಂದೆ ಕೆಲಸ ಮಾಡಿದ್ದ ಲಷ್ಕರ್-ಎ-ತೊಯ್ಬಾದ ಇಬ್ಬರು ಸ್ಥಳೀಯ ಸಹಚರರು – ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್‌ರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯ ಈ ಇಬ್ಬರನ್ನು ಜುಲೈ 16 ರವರೆಗೆ 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ಪಾಕಿಸ್ತಾನಿ ಉಗ್ರರಿಗೆ ಸಕ್ರಿಯ ಸಹಾಯ
ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಎಂಬ ಇಬ್ಬರೂ ಸ್ಥಳೀಯರು ಪಾಕಿಸ್ತಾನ ಮೂಲದ ಮೂವರು ಉಗ್ರರಿಗೆ ಪಹಲ್ಗಾಮ್ ಪ್ರದೇಶದಲ್ಲಿ ಆಶ್ರಯ ನೀಡಿದ್ದರು. ಅಲ್ಲದೆ, ದಾಳಿ ನಡೆಸಲು ಅಗತ್ಯವಾದ ಸ್ಥಳೀಯ ಮಾಹಿತಿ, ಸಂವಹನ, ಮಾರ್ಗದರ್ಶನ ಮತ್ತು ತಂಗುದಾಣ ಒದಗಿಸಿ ಉಗ್ರ ದಾಳಿಗೆ ನೆರವಾದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಎನ್‌ಐಎ ತನಿಖೆ ಮುಂದುವರಿಕೆ
ಈ ಇಬ್ಬರು ಸ್ಥಳೀಯ ಸಹಚರರನ್ನು ವಿಚಾರಣೆಗೆ ಒಳಪಡಿಸಲು ಎನ್‌ಐಎ ಇನ್ನಷ್ಟು ಸಮಯ ಕೇಳಿದ್ದು, ಉಗ್ರರ ನೆಲೆಗಳು, ದಾಳಿ ತಂತ್ರಗಳು ಮತ್ತು ಜಾಲದ ಬಗ್ಗೆಯೂ ತನಿಖೆ ಮುಂದುವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳು ಜುಲೈ 16 ರವರೆಗೆ ಇವರು ಎನ್‌ಐಎ ವಶದಲ್ಲಿರುವಂತೆ ಕೋರ್ಟ್ ಆದೇಶಿಸಿದೆ.
ಆಪರೇಷನ್ ಸಿಂದೂರ್ ಯಶಸ್ಸಿನ ಹಿನ್ನಲೆ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡಿದ್ದ ಆಪರೇಷನ್ ಸಿಂದೂರ್‌ವು ಯಶಸ್ವಿಯಾಗಿದ್ದು, ಈ ಕಾರ್ಯಾಚರಣೆಯಲ್ಲಿ ಹಲವಾರು ಉಗ್ರರು ನಾಶವಾಗಿದ್ದು, ಹೆಚ್ಚಿನ ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಉಗ್ರರ ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ.








