ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮತ್ತು ಗಿಲ್ಗಿಟ್ ಬಾಲ್ಟಿಸ್ತಾನಕ್ಕೆ ಪಾಕ್ ಸರ್ಕಾರ, ಕೊರೋನಾ ಸೋಂಕಿತರನ್ನು ಬಲವಂತವಾಗಿ ಸ್ಥಳಾಂತರಿಸುತ್ತಿದೆ . ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಮೀರ್‌ಪುರ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಕ್ವಾರೆಂಟೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಪಂಜಾಬ್ ಪ್ರಾಂತ್ಯವನ್ನು ಸಂಪೂರ್ಣ ಕೋವಿಡ್ 19 ವೈರಸ್ ಮುಕ್ತವಾಗಿಸುವ ಉದ್ದೇಶದಿಂದ ಅಲ್ಲಿರುವ ದೊಡ್ಡ ಸಂಖ್ಯೆಯ ರೋಗಿಗಳನ್ನು ಅಲ್ಲಿಗೆ ಬಲವಂತವಾಗಿ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಸೋಂಕು ದೃಢಪಟ್ಟಿರುವ ರೋಗಿಗಳನ್ನು ಸೇನಾ ನೆಲೆಗಳು ಹಾಗೂ ಯೋಧರ ಕುಟುಂಬಗಳು ವಾಸವಿರುವ ಪ್ರದೇಶದ ಸಮೀಪ ಕಳಿಸುವಂತಿಲ್ಲ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಒಳಗೆ ಕ್ವಾರೆಂಟೈನ್ ಕೇಂದ್ರಗಳನ್ನು ತೆರೆಯುವುದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪಾಕ್ ಸರ್ಕಾರ, ಪಂಜಾಬ್ ಪ್ರಾಂತ್ಯದಲ್ಲಿನ ಕೋವಿಡ್ 19 ವೈರಸ್ ಸೋಂಕಿತರನ್ನು ಬಲವಂತವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಕಳುಹಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.








