ಹೊಸದಿಲ್ಲಿ, ಮೇ 31 : ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಗುಂಪುಗಾರಿಕೆ ಮಾಡಲು ಪ್ರಯತ್ನಿಸಿದ್ದ ಪಾಕಿಸ್ತಾನಕ್ಕೆ ಸೋಲಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕ್ ಇಸ್ಲಾಮೋಫೋಬಿಯಾ ವಿರುದ್ಧ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ರಾಯಭಾರಿಗಳ ಅನೌಪಚಾರಿಕ ಗುಂಪು ಹುಟ್ಟು ಹಾಕಲು ನೋಡಿದ್ದು, ಯುಎಇ ಮತ್ತು ಮಾಲ್ಡೀವ್ಸ್ ಪಾಕ್ ಯತ್ನವನ್ನು ವಿಫಲಗೊಳಿಸಿವೆ.
ಈ ಬಗ್ಗೆ ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದ್ದು, ಕೊರೊನಾ ಹಿನ್ನಲೆಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ರಾಯಭಾರಿಗಳ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಾಕ್ ಅನೌಪಚಾರಿಕ ಸಂಘಟನೆಯನ್ನು ಸ್ಥಾಪಿಸುವ ಕುರಿತು ಪ್ರಸ್ತಾವ ಮಾಡಿದ್ದು, ಅದನ್ನು ಮಾಲ್ಡೀವ್ಸ್ ಮತ್ತು ಯುಎಇ ವಿರೋಧಿಸಿದೆ.
ಇಸ್ಲಾಮೋಫೋಬಿಯಾಕ್ಕಾಗಿ ಭಾರತವನ್ನು ಪ್ರತ್ಯೇಕಿಸುವುದಕ್ಕೆ ನನ್ನ ವಿರೋಧವಿರುವುದಾಗಿ ಹೇಳಿದ ಮಾಲ್ಡೀವ್ಸ್, ಇಂತಹ ಕ್ರಮಗಳಿಂದ ದಕ್ಷಿಣ ಏಷ್ಯಾ ವಲಯದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಕುತ್ತು ಬರುತ್ತದೆ ಎಂದು ಪ್ರತಿಪಾದಿಸಿದರು. ಜೊತೆಗೆ ಭಾರತದ ವಿರುದ್ಧವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ನನ್ನ ವಿರೋಧವಿದೆ ಎಂದು ಮಾಲ್ಡೀವ್ಸ್ ಹೇಳಿರುವುದಾಗಿ ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದೆ. ಯುಎಇ ಕೂಡ ಪಾಕ್ ನ ನಿಲುವನ್ನು ವಿರೋಧಿಸಿದ್ದು, ಕೇವಲ ವಿದೇಶಾಂಗ ಸಚಿವರು ಮಾತ್ರ ಇಂತಹ ಗುಂಪನ್ನು ರಚಿಸಿಕೊಳ್ಳಬಹುದು ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್ ನ ಖಾಯಂ ಪ್ರತಿನಿಧಿ ಥಿಲ್ಮೀಜಾ ಹುಸೇನ್ ಅವರು ಇಸ್ಲಾಮೋಫೋಬಿಯಾ ಅಥವಾ ಇನ್ನಿತರ ಯಾವುದೇ ಹಿಂಸೆಯನ್ನು ಪ್ರಚೋದಿಸುವ ಯತ್ನವನ್ನು ಮಾಲ್ಡೀವ್ಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇಂತಹ ಪ್ರಯತ್ನದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದು, ಒಂದು ನಿರ್ದಿಷ್ಟ ದೇಶವನ್ನು ಗುರಿಯಾಗಿಸಿ ಗುಂಪು ರಚನೆಗೆ ನಾವು ಸಿದ್ಧರಿಲ್ಲ ಎಂದು ಹೇಳಿದೆ.








