ಬೂದು ಪಟ್ಟಿಯಿಂದ ಹೊರಬರಲು ಪಾಕ್ ಕಸರತ್ತು – ದಾವೂದ್ ಸೇರಿದಂತೆ 88 ಭಯೋತ್ಪಾದಕ ಗುಂಪುಗಳಿಗೆ ನಿರ್ಬಂಧ ಹೇರಿದ ಪಾಕ್
ಇಸ್ಲಾಮಾಬಾದ್, ಅಗಸ್ಟ್ 23: ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ಹೊರಬರಲು ಯತ್ನಿಸುತ್ತಿರುವ ಪಾಕಿಸ್ತಾನವು ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಅವರ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಪಾಕಿಸ್ತಾನದ ದಿನಪತ್ರಿಕೆ ಶನಿವಾರ ವರದಿ ಮಾಡಿದೆ.
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) 2018 ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿತು ಮತ್ತು 2019 ರ ಅಂತ್ಯದ ವೇಳೆಗೆ 88 ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿತ್ತು. ತಪ್ಪಿದಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಗಡುವನ್ನು ನಂತರ ವಿಸ್ತರಿಸಲಾಯಿತು.

ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಅಝಾರ್, ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಮೊದಲಾದವರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ1993 ರ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿ ಗುರುತಿಸಿಕೊಂಡಿದ್ದಾನೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಪಟ್ಟಿಗೆ ಅನುಸಾರವಾಗಿ ಪಾಕಿಸ್ತಾನ ಸರ್ಕಾರ 88 ನಾಯಕರು ಮತ್ತು ಭಯೋತ್ಪಾದಕ ಗುಂಪುಗಳ ಸದಸ್ಯರನ್ನು ನಿಷೇಧಿಸಿದೆ ಎಂದು ಪಾಕಿಸ್ತಾನದ ದಿನಪತ್ರಿಕೆ ವರದಿ ಮಾಡಿದೆ. ಅಧಿಸೂಚನೆಗಳು ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ ಜಮಾತ್-ಉದ್-ದವಾ (ಜುಡಿ), ಜೆಎಂ, ತಾಲಿಬಾನ್, ದಾಶ್, ಹಕ್ಕಾನಿ ಗ್ರೂಪ್, ಅಲ್-ಖೈದಾ ಮತ್ತು ಇತರರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ವ್ಯಕ್ತಿಗಳ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ ಎಂದು ವರದಿ ತಿಳಿಸಿದೆ.

ಈ ಭಯೋತ್ಪಾದಕರಿಗೆ ಹಣಕಾಸು ಸಂಸ್ಥೆಗಳ ಮೂಲಕ ಹಣ ವರ್ಗಾವಣೆ, ಶಸ್ತ್ರಾಸ್ತ್ರ ಖರೀದಿಸುವುದು ಮತ್ತು ವಿದೇಶ ಪ್ರವಾಸ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಅದು ಹೇಳಿದೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶಗಳಲ್ಲಿ ಅಡಗಿರುವ ಎಲ್ಲಾ ನಾಯಕರು ಮತ್ತು ನಿಷ್ಕ್ರಿಯ ಟೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಸದಸ್ಯರ ಮೇಲೆ ಸಂಪೂರ್ಣ ನಿಷೇಧವನ್ನು ಅಧಿಸೂಚನೆಗಳು ಅಂಗೀಕರಿಸಿದವು.
ಇಂಟರ್‌ಪೋಲ್, ನೂರ್ ವಾಲಿ ಮೆಹ್ಸೂದ್, ಉಜ್ಬೇಕಿಸ್ತಾನ್ ಲಿಬಾಲಾನ್ ಕಲ್‍ಕಲ್ ನಾಯಕರಾದ ಫಜಲ್ ರಹೀಮ್ ಷಾ, ಸಯೀದ್, ಅಜರ್, ಮುಲ್ಲಾ ಫಜ್ಲುಲ್ಲಾ (ಅಲಿಯಾಸ್ ಮುಲ್ಲಾ ರೇಡಿಯೋ), ಜಕಿಯೂರ್ ರೆಹಮಾನ್ ಲಖ್ವಿ, ಮುಹಮ್ಮದ್ ಯಾಹ್ಯಾ ಮುಜಾಹಿದ್, ಅಬ್ದುಲ್ ಹಕೀಮ್ ಮುರಾದ್, ಅಹ್ಮದ್ ಹಕ್ಕಾನಿ, ಯಾಹ್ಯಾ ಹಕ್ಕಾನಿ, ಮತ್ತು ಇಬ್ರಾಹಿಂ ಮತ್ತು ಅವರ ಸಹಚರರು ಈ ಪಟ್ಟಿಯಲ್ಲಿದ್ದರು.

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ವಿದೇಶಗಳಿಂದ ಸಾಲ ಅಥವಾ ಆರ್ಥಿಕ ನೆರವು ಪಡೆಯಲು ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ಹೊರಬರಬೇಕಿದ್ದು, ಅದಕ್ಕಾಗಿ ಎಲ್ಲ ಕಸರತ್ತುಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.








