ಪಾಕಿಸ್ತಾನ ಸಂಸತ್ ಭವನ ಕ್ಯಾಂಟೀನ್ ನ ಆಹಾರದಲ್ಲಿ ಜಿರಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ಯಾಂಟೀನ್ ಮುಚ್ಚಲಾಗಿದೆ. ಇಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈಗಾಗಲೇ ಹಲವು ಜನಪ್ರತಿನಿಧಿಗಳು ಇಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದಾರೆ.
ಇತ್ತೀಚೆಗೆ ನೀಡಿದ ಆಹಾರದಲ್ಲಿ ಜಿರಳೆ ಇರುವುದನ್ನು ಗಮನಿಸಿದ ಸಂಸದರು ಇಸ್ಲಾಮಾಬಾದ್ ಜಿಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಎರಡು ಕ್ಯಾಂಟೀನ್ ಗಳಲ್ಲಿ ತಪಾಸಣೆ ನಡೆಸಿದರು. ಗ್ರಾಹಕರು ತಿನ್ನುವ ಪ್ರದೇಶದಲ್ಲಿ ಕ್ರಿಮಿಕೀಟಗಳು, ಅಡುಗೆಮನೆಯಲ್ಲಿ ಅನೈರ್ಮಲ್ಯ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಪರಿಸ್ಥಿತಿಗಳನ್ನು ಕಂಡುಹಿಡಿದಿದ್ದಾರೆ. ಆ ಎರಡು ಕ್ಯಾಂಟೀನ್ಗಳನ್ನು ಸೀಲ್ ಮಾಡಲಾಗಿದೆ.
ಪಾಕಿಸ್ತಾನ್ ಸಂಸತ್ ಭವನದ ಕ್ಯಾಂಟೀನ್ಗಳಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. 2014ರಲ್ಲಿ ಕೆಚಪ್ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿತ್ತು. 2019 ರಲ್ಲಿ ಸಂಸದರು ಇಲ್ಲಿ ಬಳಸುವ ಮಾಂಸದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈ ಹಿಂದೆಯೂ ಸಂಸತ್ತಿನ ಲಾಡ್ಜ್ಗಳಲ್ಲಿ ಇಲಿಗಳು ಕಾಣಿಸಿಕೊಂಡಿದ್ದವು.








