ಇಸ್ಲಾಮಾಬಾದ್, ಜೂನ್ 8: 2020 -21ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರ ದರವನ್ನು ದಾಖಲಿಸಿದೆ. ಹಾಗಾಗಿ ಬಡ್ಡಿ ದರವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ (ಎಸ್ ಬಿಪಿ) ಹೇಳಿದೆ.
ಹಣದುಬ್ಬರ ಎಂಬುವುದು ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟದಾಗಿದ್ದು, ಅಗತ್ಯ ವಸ್ತುಗಳ ಬೆಲೆ ಹಾಗೂ ಸೇವೆಗಳ ದರ ಏರಿಕೆ ಕಾಣುವುದನ್ನು ಹಣದುಬ್ಬರ ಎಂದು ಕರೆಯಲಾಗುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆ ಆಗುತ್ತದೆ.

ಪಾಕಿಸ್ತಾನದ ‘ಡಾನ್ ಪತ್ರಿಕೆ’ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಹಣದುಬ್ಬರದ ದರ ಇಳಿಯಲಿ ಎಂಬ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಇದರ ಪರಿಣಾಮವಾಗಿ ಖಾಸಗಿಯವರು ಬ್ಯಾಂಕ್ ಗಳಿಂದ ಸಾಲ ಪಡೆಯುವುದನ್ನು ಬಿಟ್ಟು, ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನೇ ಏರಿಕೆ ಮಾಡಿದರು. 2020-21 ರ ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಶೇಕಡಾ14.6ಕ್ಕೆ ತಲುಪಿದ್ದು, 12 ವರ್ಷದಲ್ಲೇ ಅದು ಗರಿಷ್ಟ ಮಟ್ಟವಾಗಿತ್ತು. ಆ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರವನ್ನು ಶೇಕಡಾ 13.25 ಪರ್ಸೆಂಟ್ ಗೆ ಏರಿಸಿತು. ಅಷ್ಟರಲ್ಲಾಗಲೇ ದೇಶಕ್ಕೆ ಕೊರೊನಾ ಸೋಂಕು ವ್ಯಾಪಿಸಿದ್ದು, ಇದರಿಂದಾಗಿ ಅರ್ಥಿಕತೆಯೇ ಬುಡಮೇಲಾಗಿದೆ. ಬೇಡಿಕೆ ಕುಸಿದ ಪರಿಣಾಮವಾಗಿ ಹಣದುಬ್ಬರ ಇಳಿಕೆಯಾಗಿ ಮೂರೇ ತಿಂಗಳಲ್ಲಿ ಬಡ್ಡಿದರವನ್ನು ಶೇಕಡಾ 5.25ಕ್ಕೆ ಇಳಿಸುವ ಅನಿವಾರ್ಯತೆಗೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಸಿಲುಕಿತು.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹೇಳುವ ಪ್ರಕಾರ ಅಭಿವೃದ್ಧಿ ಹೊಂದಿದ ಆರ್ಥಿಕತೆಗೆ ಮಾತ್ರವಲ್ಲ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಹೋಲಿಸಿದರೂ ಪಾಕಿಸ್ತಾನದ ಹಣದುಬ್ಬರ ದರ ಬಹಳಷ್ಟು ಏರಿಕೆ ಕಂಡಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.








