ರಾವಲ್ಪಿಂಡಿ: ಪಾಕ್ (Pakistan) ತನ್ನ ನೆಲದಲ್ಲಿ ಬಾಂಗ್ಲಾ ವಿರುದ್ಧ ಹೀನಾಯ ಸೋಲು ಕಂಡಿದೆ. ಬಾಂಗ್ಲಾದೇಶ (Bangladesh) ವಿರುದ್ಧ ಪಾಕಿಸ್ತಾನ್ ತಂಡ 10 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಮೊದಲ ಬಾರಿಗೆ ಬಾಂಗ್ಲಾ ಐತಿಹಾಸಿಕ ಗೆಲುವು ಸಾಧಿಸಿದ ಸಾಧನೆ ಮಾಡಿದೆ.
ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು (Test Series) 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಗ 171 ರನ್ ಗಳಿಸಿ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದ ಮೊಹಮ್ಮದ್ ರಿಜ್ವಾನ್ (Mohammad Rizwan) ಬ್ಯಾಟ್ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಈ ಯಡವಟ್ಟಿನಿಂದಲೇ ಪಾಕಿಸ್ತಾನ್ ಹೀನಾಯ ಸೋಲು ಕಾಣುವಂತಾಗಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಪಾಕಿಸ್ತಾನ 146 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 565 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 30 ರನ್ ಗಳಿಸಿ ಗೆಲುವಿನ ದಡ ಸೇರಿತು.
ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್ಗೆ 4 ವಿಕೆಟ್ ಕಿತ್ತರೆ, ಆಲ್‌ರೌಂಡರ್ ಶಕಿಬ್ ಅಲ್ ಹಸನ್ 3 ವಿಕೆಟ್,ಶೊರಿಫುಲ್, ಹಸನ್ ಮೊಹಮ್ಮದ್ ಹಾಗೂ ನಹಿದ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಜಾಕಿರ್ ಹಸನ್ 15 ರನ್, ಶಾದ್‌ಮನ್ ಇಸ್ಲಾಮ್ 9 ರನ್ ಗಳಿಸಿದರು.
ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇಲ್ಲಿಯವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಈಗ 14ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಗೆದ್ದ ಸಾಧನೆ ಮಾಡಿದೆ.
ಸಂಕ್ಷಿಪ್ತ ಸ್ಕೋರ್..
ಮೊದಲ ಇನ್ನಿಂಗ್ಸ್
ಪಾಕಿಸ್ತಾನ – 448/6d, ಬಾಂಗ್ಲಾದೇಶ – 565/10
2ನೇ ಇನ್ನಿಂಗ್ಸ್
ಪಾಕಿಸ್ತಾನ – 146/10, ಬಾಂಗ್ಲಾದೇಶ – 30/0