ಜಗತ್ತಿನಾದ್ಯಂತ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಕಷ್ಟಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಭೀಕರ ದಿತ್ವಾ ಚಂಡಮಾರುತಕ್ಕೆ ತುತ್ತಾಗಿ ನಲುಗಿರುವ ನೆರೆಯ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ನೆಪದಲ್ಲಿ ಅವಧಿ ಮೀರಿದ (Expired) ಔಷಧಗಳು ಮತ್ತು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಳುಹಿಸುವ ಮೂಲಕ ಪಾಕಿಸ್ತಾನ ತನ್ನ ದಾರಿದ್ರ್ಯ ಮತ್ತು ಬೇಜವಾಬ್ದಾರಿತನವನ್ನು ಜಗತ್ತಿನೆದುರು ಅನಾವರಣಗೊಳಿಸಿದೆ.
ಶ್ರೀಲಂಕಾದ ದುರಂತ ಮತ್ತು ಪಾಕಿಸ್ತಾನದ ಎಡವಟ್ಟು
ಪ್ರಸ್ತುತ ಶ್ರೀಲಂಕಾ ದೇಶವು ಇತಿಹಾಸದಲ್ಲಿಯೇ ಕಂಡಿರದಂತಹ ಭೀಕರ ಪ್ರಾಕೃತಿಕ ವಿಕೋಪವನ್ನು ಎದುರಿಸುತ್ತಿದೆ. ದಿತ್ವಾ ಚಂಡಮಾರುತದ ಆರ್ಭಟಕ್ಕೆ ದ್ವೀಪ ರಾಷ್ಟ್ರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಶ್ರೀಲಂಕಾಗೆ ತ್ವರಿತವಾಗಿ ಸ್ಪಂದಿಸಿವೆ.
ತಾನೂ ಕೂಡ ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದ ಪಾಕಿಸ್ತಾನ, ಕೊಲಂಬೊಗೆ ವಿಮಾನದ ಮೂಲಕ ವೈದ್ಯಕೀಯ ಕಿಟ್‌ಗಳು ಮತ್ತು ಆಹಾರದ ಪ್ಯಾಕೆಟ್‌ಗಳನ್ನು ರವಾನಿಸಿತ್ತು. ಆದರೆ, ಶ್ರೀಲಂಕಾ ಅಧಿಕಾರಿಗಳು ಈ ಪರಿಹಾರ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಆಘಾತ ಕಾದಿತ್ತು. ಪಾಕಿಸ್ತಾನ ಕಳುಹಿಸಿದ ಬಹುತೇಕ ಮೆಡಿಕಲ್ ಕಿಟ್‌ಗಳ ಅವಧಿ ಮುಗಿದಿತ್ತು ಮತ್ತು ಆಹಾರ ಪದಾರ್ಥಗಳು ಸೇವನೆಗೆ ಯೋಗ್ಯವಾಗಿರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನವನ್ನು ನೆಟ್ಟಿಗರು ಜೋಕರ್ ಎಂದು ಗೇಲಿ ಮಾಡುತ್ತಿದ್ದಾರೆ.
ರಾಜತಾಂತ್ರಿಕ ಮಟ್ಟದಲ್ಲಿ ತೀವ್ರ ಆಕ್ರೋಶ
ಪಾಕಿಸ್ತಾನದ ಈ ನಡೆ ಶ್ರೀಲಂಕಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಸಂಕಷ್ಟದಲ್ಲಿರುವ ಮಿತ್ರ ರಾಷ್ಟ್ರಕ್ಕೆ ಸಹಾಯ ಮಾಡುವ ಬದಲು, ವಿಷವುಣ್ಣಿಸುವಂತಹ ಕೆಲಸವನ್ನು ಪಾಕಿಸ್ತಾನ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಶ್ರೀಲಂಕಾದ ವಿದೇಶಾಂಗ ಇಲಾಖೆ ಮತ್ತು ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೊಲಂಬೊದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಮತ್ತು ಇಸ್ಲಾಮಾಬಾದ್ ಅಧಿಕಾರಿಗಳಿಗೆ ಶ್ರೀಲಂಕಾ ಸರ್ಕಾರ ತನ್ನ ಅಸಮಾಧಾನವನ್ನು ಅಧಿಕೃತವಾಗಿ ತಿಳಿಸಿದೆ. ನಮ್ಮ ರಾಷ್ಟ್ರವು ಅತ್ಯಂತ ಸಂಕಷ್ಟದಲ್ಲಿರುವಾಗ ಪಾಕಿಸ್ತಾನ ಕಳುಹಿಸಿದ ನೆರವಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಬದಲಾಗಿ ನಂಬಿಕೆ ದ್ರೋಹದ ಕೆಲಸ ಎಂದು ಶ್ರೀಲಂಕಾ ಅಧಿಕಾರಿಗಳು ಕಿಡಿಕಾರಿದ್ದಾರೆ.
ಎಲ್ಲಾ ಪರಿಹಾರ ಸಾಮಗ್ರಿಗಳ ತಪಾಸಣೆಗೆ ಆದೇಶ
ಪಾಕಿಸ್ತಾನದ ಈ ಅಚಾತುರ್ಯದಿಂದ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ, ವಿದೇಶಗಳಿಂದ ಬರುವ ಎಲ್ಲಾ ಪರಿಹಾರ ಸಾಮಗ್ರಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲು ನಿರ್ಧರಿಸಿದೆ. ವಿಶೇಷವಾಗಿ ಕಳಪೆ ಗುಣಮಟ್ಟದ ವಸ್ತುಗಳನ್ನು ಕಳುಹಿಸುವ ಕುಖ್ಯಾತಿ ಹೊಂದಿರುವ ರಾಷ್ಟ್ರಗಳಿಂದ ಬರುವ ಸರಕುಗಳ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ, ಅವಧಿ ಮೀರಿದ ಅಥವಾ ಕಳಪೆ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸದಂತೆ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಲಾಗಿದೆ.
ಹಳೇ ಚಾಳಿ ಮುಂದುವರಿಸಿದ ಪಾಕಿಸ್ತಾನ
ಪಾಕಿಸ್ತಾನ ಇಂತಹ ಅಮಾನವೀಯ ಎಡವಟ್ಟುಗಳನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಸಂದರ್ಭದಲ್ಲಿಯೂ ಪಾಕಿಸ್ತಾನ ಇದೇ ರೀತಿಯ ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ನೇಪಾಳಕ್ಕೆ ಗೋಮಾಂಸದಿಂದ ತಯಾರಿಸಿದ ಮಸಾಲಾ ಪ್ಯಾಕೆಟ್‌ಗಳನ್ನು ಪರಿಹಾರದ ರೂಪದಲ್ಲಿ ಕಳುಹಿಸಿ ಪಾಕಿಸ್ತಾನ ಜಗತ್ತಿನಾದ್ಯಂತ ಛೀಮಾರಿ ಹಾಕಿಸಿಕೊಂಡಿತ್ತು. ಈಗ ಶ್ರೀಲಂಕಾ ವಿಷಯದಲ್ಲಿಯೂ ಅದೇ ನಿರ್ಲಕ್ಷ್ಯ ತೋರುವ ಮೂಲಕ ತಾನು ಪಾಠ ಕಲಿಯದ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಲು ಮತ್ತು ಭಾರತಕ್ಕೆ ಪೈಪೋಟಿ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಆದರೆ, ಇಂತಹ ಘಟನೆಗಳು ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ.
ಶ್ರೀಲಂಕಾದಲ್ಲಿ ಮುಂದುವರಿದ ಹಾಹಾಕಾರ
ಮತ್ತೊಂದೆಡೆ, ಶ್ರೀಲಂಕಾದಲ್ಲಿ ಚಂಡಮಾರುತದ ಅಬ್ಬರ ಮುಂದುವರಿದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ ಲಂಕಾದಲ್ಲಿ ಕನಿಷ್ಠ 390 ಜನರು ಮೃತಪಟ್ಟಿದ್ದು, 352ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಒಂದೇ ದಿನ ಈ ಭಾಗದ ನಾಲ್ಕು ರಾಷ್ಟ್ರಗಳಲ್ಲಿ ಸುಮಾರು 1200 ಜನರು ಬಲಿಯಾಗಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು ಪರಿಸ್ಥಿತಿಯನ್ನು ವಿವರಿಸುತ್ತಾ, ನಮ್ಮ ದೇಶದ ಇತಿಹಾಸದಲ್ಲಿಯೇ ನಾವು ಎದುರಿಸುತ್ತಿರುವ ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪ ಇದಾಗಿದೆ ಎಂದು ಹೇಳಿದ್ದಾರೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ನೆರೆಹೊರೆಯ ರಾಷ್ಟ್ರಗಳಿಂದ ಪ್ರಾಮಾಣಿಕ ನೆರವನ್ನು ಶ್ರೀಲಂಕಾ ಎದುರು ನೋಡುತ್ತಿದೆ ಹೊರತು, ಪಾಕಿಸ್ತಾನದಂತಹ ಕಳಪೆ ನಾಟಕವನ್ನಲ್ಲ ಎಂಬುದು ಸ್ಪಷ್ಟವಾಗಿದೆ.








