ಸೌದಿ ಅರೇಬಿಯಾದ ಜೊತೆ ಸಂಧಾನಕ್ಕೆ ಮುಂದಾದ ಪಾಕಿಸ್ತಾನ
ಇಸ್ಲಾಮಾಬಾದ್, ಅಗಸ್ಟ್ 13: ಸೌದಿ ಅರೇಬಿಯಾವನ್ನು ಎದುರು ಹಾಕಿಕೊಂಡು ಅಕ್ಷರಶಃ ಏಕಾಂಗಿಯಾಗಿರುವ ಪಾಕಿಸ್ತಾನ ಇದೀಗ ಸಂಧಾನಕ್ಕೆ ಮುಂದಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಅಹ್ಮದ್ ಬಜ್ವಾ ಮುಂದಿನ ವಾರ ಸೌದಿ ಅರೇಬಿಯಾದ ಜೊತೆಗಿನ ಉದ್ವೇಗವನ್ನು ಶಮನಗೊಳಿಸಲು ಪ್ರಯತ್ನಿಸುವ ಸಲುವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಾಕಿಸ್ತಾನ ಪತ್ರಿಕೆ ವರದಿ ಮಾಡಿದೆ.
ಕಳೆದ ವಾರ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ, ಸೌದಿ ನೇತೃತ್ವದ ಇಸ್ಲಾಮಿಕ್ ಸಮ್ಮೇಳನದ ಸಂಘಟನೆಗಳ ಸಭೆ ಕರೆದು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವಂತೆ ಕೇಳಿಕೊಂಡರು. ನೀವು ಅದನ್ನು ಕರೆಯಲು ಸಾಧ್ಯವಾಗದಿದ್ದರೆ, ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿಲ್ಲಲು ಮತ್ತು ಬೆಂಬಲಿಸಲು ಸಿದ್ಧವಾಗಿರುವ ಇಸ್ಲಾಮಿಕ್ ರಾಷ್ಟ್ರಗಳ ಸಭೆಯನ್ನು ಕರೆಯುವಂತೆ ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಇದರಿಂದ ಸಿಟ್ಟಿಗೆದ್ದ ಸೌದಿ ಅರೇಬಿಯಾ, ಪಾಕಿಸ್ತಾನಕ್ಕೆ ಘೋಷಣೆ ಮಾಡಿರುವ 1.4 ಲಕ್ಷ ಕೋಟಿ ರೂ. ಗಳ ಸಾಲವನ್ನೂ ಕೊಡುವುದಿಲ್ಲ, ಜೊತೆಗೆ ಈಗಾಗಲೇ ವಾಗ್ದಾನ ಮಾಡಿರುವ ತೈಲವನ್ನೂ ನೀಡುವುದಿಲ್ಲ ಎಂದು ಹೇಳಿತು.
ಅಂದಿನಿಂದ ವಿದೇಶಾಂಗ ಸಚಿವ ಖುರೇಷಿ ಎರಡು ಬಾರಿ ಪತ್ರಿಕಾಗೋಷ್ಠಿಯನ್ನು ಕರೆದು ಸ್ಪಷ್ಟೀಕರಣವನ್ನು ನೀಡಿದರು. ಈ ವಿಚಾರದಲ್ಲಿ ಸಹಾಯ ಮಾಡಲು ಚೀನಾವು ನಿರಾಕರಿಸಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜನೀತಿಯಲ್ಲಿ ಮೂಗು ತೂರಿಸುವುದಿಲ್ಲ ಎಂದಿದೆ.
ಇದರಿಂದ ಕಂಗಾಲಾಗಿರುವ ಪಾಕಿಸ್ತಾನ ಇದೀಗ ಸಂಧಾನಕ್ಕೆ ರಾಯಭಾರಿಯಾಗಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಅಹ್ಮದ್ ಬಜ್ವಾ ಅವರನ್ನು ಕಳುಹಿಸಿಕೊಡಲು ನಿರ್ಧರಿಸಿದೆ.