ಕ್ಯಾನ್ಬೆರಾ: ಆಸ್ಟ್ರೇಲಿಯಾ ನೆಲದಲ್ಲೇ ಬರೋಬ್ಬರಿ 22 ವರ್ಷಗಳ ನಂತರ ಪಾಕಿಸ್ತಾನ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ (Pakistan) 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಮೊಹಮ್ಮದ್ ರಿಜ್ವಾನ್ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿ ಇದಾಗಿದೆ.
ಪಾಕಿಸ್ತಾನ್ ಆಸ್ಟ್ರೇಲಿಯಾದಲ್ಲಿ ಕೊನೆಯದಾಗಿ 2002ರಲ್ಲಿ ಸರಣಿ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಕೇವಲ 140 ರನ್ ಗಳಿಸಿತ್ತು. 141 ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್ ಬ್ಯಾಟರ್ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಪಾಕ್ ಗೆ ಮೊದಲ ವಿಕೆಟ್ ಗೆ 84 ರನ್ ಗಳ ಜೊತೆಯಾಟ ಸಿಕ್ಕಿತು. ಆರಂಭಿಕರ ವಿಕೆಟ್ ಪತನವಾದ ಬಳಿಕ ಕ್ರೀಸ್ಗಿಳಿದ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಜೋಡಿ ವಿಕೆಟ್ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿ, ಐತಿಹಾಸಿಕ ಗೆಲುವು ಸಾಧಿಸುವಂತೆ ಮಾಡಿದರು.
ಪಾಕ್ ಪರ ಸೈಮ್ ಅಯೂಬ್ 42 ರನ್, ಅಬ್ದುಲ್ಲಾ ಶಫಿಕ್ 37 ರನ್ ಗಳಿಸಿ ಔಟಾದರೆ, ಮೊಹಮ್ಮದ್ ರಿಜ್ವಾನ್ 30 ರನ್ ಹಾಗೂ ಬಾಬರ್ ಆಜಂ (Babar Azam) 28 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ತಂಡವು 31.5 ಓವರ್ ಗಳಲ್ಲಿ ಕೇವಲ 140 ರನ್ ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್ಗಳು ಅಲ್ಪ ಮೊತ್ತಕ್ಕೆ ಕುಸಿದರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಆತಿಥೇಯರನ್ನು 31.5 ಓವರ್ಗಳಲ್ಲಿ 140 ರನ್ ಗಳಿಗೆ ಪಾಕ್ ಬೌಲರ್ ಗಳು ಔಟ್ ಮಾಡಿದರು.
ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 3, ನಸೀಮ್ ಶಾ 3, ಹ್ಯಾರಿಸ್ ರೌಫ್ 2 ವಿಕೆಟ್ ಪಡೆದರು.