Imran Khan: ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ..
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ತುರ್ತು ಭೂ ಸ್ಪರ್ಷ ಮಾಡಿದೆ.
ಇಮ್ರಾನ್ ಖಾನ್ ಶನಿವಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಗುಜ್ರಾನ್‌ವಾಲಾಗೆ ಹೋಗುತ್ತಿದ್ದಾಗ ವಿಮಾನ ಸಮತೋಲನ ಕಳೆದುಕೊಂಡಿದ್ದರಿಂದ ಪೈಲಟ್ ತರಾತುರಿಯಲ್ಲಿ ವಿಮಾನವನ್ನ ಇಸ್ಲಾಮಾಬಾದ್ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
ನಂತರ ಇಮ್ರಾನ್ ಖಾನ್ ರಸ್ತೆ ಮೂಲಕ ಗುಜ್ರಾನ್ವಾಲಾಗೆ ಪ್ರಯಾಣಿಸಿದ್ದಾರೆ.
ಗುಜ್ರಾನ್‌ವಾಲಾ ತಲುಪಿದ ಕೂಡಲೇ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷರು ಜನರನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಸರ್ಕಾರದಿಂದ ದೇಶ ಮತ್ತು ಆರ್ಥಿಕತೆಯನ್ನ ಉಳಿಸಬೇಕಾದರೆ ನೀವು ಧ್ವನಿ ಎತ್ತಬೇಕು ಎಂದು ಎಚ್ಚರಿಸಿದ್ದಾರೆ.
ಇಮ್ರಾನ್ ಖಾನ್ ಮತ್ತೊಮ್ಮೆ ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಒಂದು ವೇಳೆ ಸರಕಾರ ಹಾಗೆ ಮಾಡದಿದ್ದಲ್ಲಿ ಶಾಂತಿಯುತವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಅಥವಾ ಬಲವಂತವಾಗಿ ಚುನಾವಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ
ಮಹಿಳಾ ನ್ಯಾಯಾಧೀಶರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಅವರು ನ್ಯಾಯಾಲಯದ ನಿಂದನೆ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಮ್ರಾನ್ ನೀಡಿದ ಉತ್ತರ ಅತೃಪ್ತಿಕರ ಎಂದು ಆರೋಪಿಸಿ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ರೂಪಿಸಲು ನ್ಯಾಯಾಲಯ ನಿರ್ಧರಿಸಿದೆ.








