ಕುಂದಾಪುರ : ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಆರೋಪಿ ರಾಘವೇಂದ್ರ ಗಾಣಿಗನಿಗೆ ಮಾರ್ಚ್ 13ರವರೆಗೆ ಚಿಕಿತ್ಸೆ ನೀಡುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ. ಆರೋಪಿ ಪರ ವಕೀಲ ಜಿ. ಸಂತೋಷ್ ಕುಮಾರ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತ ಯಾವುದೇ ದುರುದ್ದೇಶವಿಲ್ಲದೇ ಆ ರೀತಿ ವರ್ತಿಸಿದ್ದಾನೆ. ಪೊಲೀಸರ ಎದುರು ಕೂಡಾ ಅದೇ ರೀತಿ ಕೂಗುತ್ತಿದ್ದ. ಈ ನಿಟ್ಟಿನಲ್ಲಿ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಜಾಮೀನು ನೀಡಬೇಕು ಎಂಬುದಾಗಿ ವಾದ ಮಂಡಿಸಿದರು. ಇವರ ವಾದಗಳನ್ನು ಆಲಿಸಿದ ಕೋರ್ಟ್ ಆರೋಪಿ ರಾಘವೇಂದ್ರನಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ 13ರ ವರೆಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದೇಶಿಸಿದೆ.
ಇನ್ನು ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿರುವ ರಾಘವೇಂದ್ರ ಗಾಣಿಗ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕೂಗಿದ್ದ.








