ಮುಂಬೈ, ಮೇ 31 : ಜಮ್ಮು ಮತ್ತು ಕಾಶ್ಮೀರ ಮಿಲಿಟರಿ ಇಂಟಿಲಿಜೆನ್ಸ್ ಹಾಗೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಯಶಸ್ವಿ ಕಾರ್ಯಚರಣೆಯಿಂದ ಭಾರತೀಯ ಸೇನಾ ಮಾಹಿತಿಯನ್ನು ರಹಸ್ಯವಾಗಿ ಕದಿಯುತ್ತಿದ್ದ ಪಾಕಿಸ್ತಾನ ಐಎಸ್ಐ ಗೂಡಚರ್ಯರ ಜಾಲವನ್ನು ಪತ್ತೆಹಚ್ಚಲಾಗಿದೆ. ಮುಂಬೈನಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಪಾಕ್ ಬೆಂಬಲಿತ ಗೂಢಚರ್ಯರ ತಂಡವೊಂದು ಭಾರತೀಯ ಸೇನೆಯ ಲಡಾಕ್ ನಲ್ಲಿನ ಕಾರ್ಯಚರಣೆ, ಚಲನವಲಗಳ ಮಾಹಿತಿ ಕಲೆ ಹಾಕಿ ಕಾನೂನು ಬಾಹಿರವಾಗಿ ಇಂಟರ್ನೆಟ್ ಪ್ರೊಟೋಕಾಲ್ ಮಲ್ಟಿಮೀಡಿಯಾ ವಾಯ್ಸ್ ಓವರ್ ಮೂಲಕ ಪಾಕಿಸ್ತಾನದ ಐ.ಎಸ್.ಐಗೆ ಮಾಹಿತಿ ರವಾನಿಸುತ್ತಿತ್ತು. ಮುಂಬೈನಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಪಾಕ್ ಬೆಂಬಲಿತ ಗೂಢಚರ್ಯರ ತಂಡವನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸಿಮ್ ಬಾಕ್ಸಸ್, ಸ್ಟಾಂಡ್ ಬೈ ಸಿಮ್ ಬಾಕ್ಸ್, 191 ಸಿಮ್ ಕಾರ್ಡ್, ಲ್ಯಾಪ್ ಟಾಪ್ ಮಾಡೆಮ್, ಆಯಂಟೆನಾ, ಬ್ಯಾಟರಿ ಹಾಗೂ ಕನೆಕ್ಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ ತಿಂಗಳ ಪ್ರಾರಂಭದಲ್ಲಿ ಸೇನಾ ಮಾಹಿತಿಯನ್ನು ರಹಸ್ಯವಾಗಿ ಕದಿಯುತ್ತಿರುವ ಜಾಲವೊಂದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುವ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಇತ್ತೀಚೆಗೆ ಸೇನಾ ಅಧಿಕಾರಿಯೊಬ್ಬರಿಗೆ ಅಪರಿಚಿತ ಇಂಟರ್ನೆಟ್ ನಂಬರ್ ನಿಂದ ಕರೆಯೊಂದು ಬಂದಿದ್ದು, ಆ ಮಾಹಿತಿಯ ಜಾಡು ಹಿಡಿದು ಭಾರತೀಯ ಸೇನೆ ತನಿಖೆ ಆರಂಭಿಸಿತು. ತನಿಖೆಯಲ್ಲಿ ಮುಂಬೈನ ಸ್ಥಳೀಯ ನಂಬರ್ ಗೆ ಪಾಕಿಸ್ತಾನದಿಂದ ಕರೆಗಳು ಬಂದಿರುವುದು ಪತ್ತೆಯಾಗಿದ್ದು, ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಕಾರ್ಯಚರಣೆಗೆ ಇಳಿಯಿತು. ಒಂದು ತಿಂಗಳ ಕಾರ್ಯಚರಣೆ ನಂತರ ಭಾರತೀಯ ಸೇನೆ ಹಾಗೂ ಮುಂಬೈ ಪೊಲೀಸರು ಪಾಕಿಸ್ತಾನದ ಗೂಢಚರ್ಯರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಪಾಕಿಸ್ತಾನದ ಗೂಢಚರ್ಯರನ್ನು ಬಂಧಿಸಿದ್ದು, ಈ ಜಾಲದಲ್ಲಿ ಮತ್ತಷ್ಟು ಗೂಢಚರ್ಯರು ಮುಂಬೈ ಸೇರಿದಂತೆ ಇತರೆಡೆ ಇರುವುದು ತಿಳಿದು ಬಂದಿದೆ.








